ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಜನತಾದಳ ಯುನೈಟೆಡ್ (ಜೆಡಿ-ಯು)ಪಕ್ಷದ ಏಳು ಶಾಸಕರಲ್ಲಿ ಆರು ಶಾಸಕರು ಆಡಳಿತರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಈ ಬಗ್ಗೆ ಅರುಣಾಚಲ ಪ್ರದೇಶದ ವಿಧಾನಸಭೆಯ ಬಿಡುಗಡೆ ಮಾಡಿದ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲದ (ಪಿಪಿಎ) ಏಕೈಕ ಶಾಸಕ, ಲಿಕಬಾಲಿ ಕ್ಷೇತ್ರದ ಕಾರ್ಡೋ ನೈಗ್ಯೋರ್ ಕೂಡ ಕೇಸರಿ ಪಡೆಗೆ ಸೇರಿದ್ದಾರೆ.
ಅರುಣಾಚಲ ಪ್ರದೇಶದ ಪಂಚಾಯತ್ ಮತ್ತು ಪುರಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುವ ಒಂದು ದಿನ ಮುಂಚಿತವಾಗಿ ಎರಡು ಪಕ್ಷದ ಶಾಸಕರು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ತಲೇಮ್ ತಬೋಹ್, ಹಯೆಂಗ್ ಮಾಂಗ್ಫಿ, ಜಿಕ್ಕೆ ಟಕೊ, ಡೋರ್ಜಿ ವಾಂಗ್ಡಿ ಖರ್ಮಾ, ಡೊಂಗ್ರು ಸಿಯೊಂಗ್ಜು, ಅವರು ಪಕ್ಷ ಬದಲಾಯಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನವೆಂಬರ್ 26 ರಂದು ಜೆಡಿ(ಯು) ಪಕ್ಷವು ಜಿಕ್ಕೆ ಟಕೊ, ಡೊಂಗ್ರು ಸಿಯೊಂಗ್ಜು , ಡೋರ್ಜಿ ವಾಂಗ್ಡಿ ಖರ್ಮಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಡಿ ಅಮಾನತುಗೊಳಿಸಿತ್ತು. ಅಲ್ಲದೆ ಜೆಡಿ(ಯು)ನ ಆರು ಶಾಸಕರು, ಪಕ್ಷದ ಇತರ ಸದಸ್ಯರೊಂದಿಗೆ ಚರ್ಚಿಸದೆ ತಲೇಮ್ ತಬೋಹ್ ಅವರನ್ನು ಶಾಸಕಾಂಗ ಪಕ್ಷದ ಹೊಸ ನಾಯಕನನ್ನಾಗಿ ಆರಿಸಿದ್ದರು.