ಚಿಕ್ಕಮಗಳೂರು : ಡಿಸೆಂಬರ್ ಲಾಸ್ಟ್ ವೀಕ್ನಲ್ಲೇ ಚಿಕ್ಕಮಗಳೂರಿಗೆ ಹೋಗಿ ವಾರ ಅಲ್ಲೇ ಇದ್ದು ಹೊಸ ವರ್ಷಕ್ಕೆ ಸ್ವಾಗತ ಕೋರಿ ಜನವರಿ 1 ಅಥವ 2ಕ್ಕೆ ವಾಪಸ್ ಬರೋಣ ಅನ್ನೋ ಪ್ಲಾನ್ ಇದ್ರೆ ನಿಮ್ಮ ಪ್ಲಾನನ್ನ ಡಿಸೆಂಬರ್ 30ಕ್ಕೆ ಬದಲಿಸಿಕೊಳ್ಳಿ. ಬಂದು ಮತ್ತೆ ವಾಪಸ್ ಹೋಗೋದು ಬೇಡ. ಯಾಕೆಂದರೆ, ಇದೇ ತಿಂಗಳ 25ನೇ ತಾರೀಖಿನಿಂದ 30ನೇ ತಾರೀಖಿನವರಗೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗದ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಬಗಾಧಿ ಗೌತಮ್ ಆದೇಶ ಹೊರಡಿಸಿದ್ದಾರೆ. ಇದೇ ತಿಂಗಳ 19ನೇ ತಾರೀಖಿನಿಂದ ದತ್ತಜಯಂತಿ ಆರಂಭವಾಗಿದ್ದು, 29ನೇ ತಾರೀಖಿನಿವರೆಗೂ ಇರುತ್ತೆ.
ಈಗಾಗಲೇ ದತ್ತಭಕ್ತರು ಮಾಲೆ ಧರಿಸಿ ವೃತ್ತದಲ್ಲಿದ್ದಾರೆ. ವೃತದಲ್ಲಿರೋ ಭಕ್ತರು ಡಿಸೆಂಬರ್ 27 ರಂದು ಅನಸೂಯ ಜಯಂತಿ, 28ರಂದು ನಗರದಲ್ಲಿ ಸಾಂಕೇತಿಕ ಶೋಭಾಯಾತ್ರೆ ಹಾಗೂ 29ರಂದು ದತ್ತಪೀಠದಲ್ಲಿ ಪೂಜೆ ನಡೆಸಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಈ ಮೂರು ದಿನಗಳ ಕಾಲ ಕೂಡ ದತ್ತಪೀಠದಲ್ಲಿ ಪೂಜೆ ನಡೆಯಲಿದೆ.
ಜೊತೆಗೆ, ರಾಜ್ಯಾದ್ಯಂತ ಮಾಲೆ ಧರಿಸಿರೋ ಭಕ್ತರು ಕೂಡ ಅಂದು ದತ್ತಪೀಠಕ್ಕೆ ಬಂದು ಪೂಜೆ ಸಲ್ಲಿಸಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಹಾಗಾಗಿ, ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಹೊನ್ನಮ್ಮನ ಹಳ್ಳ ಹಾಗೂ ಮಾಣಿಕ್ಯಧಾರ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಡಿಸೆಂಬರ್ 25 ಸಂಜೆ ಆರು ಡಿಸೆಂಬರ್ 30ರ ಬೆಳಗ್ಗೆ ಆರು ಗಂಟೆಯವರೆಗೆ ಪ್ರವಾಸಿಗರಿಗೆ ಮುಳ್ಳಯ್ಯನಗಿರಿ ಭಾಗದ ಟೂರಿಸ್ಟ್ ಪ್ಲೇಸ್ಗಳಿಗೆ ನಿಷೇಧ ಹೇರಲಾಗಿದೆ.