Saturday, January 23, 2021
Home ಜಿಲ್ಲೆ ಕೋಲಾರ ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್ : 6 ಮಂದಿ ಅರೆಸ್ಟ್ , 20.5 ಲಕ್ಷ ನಗದು...

ಇದೀಗ ಬಂದ ಸುದ್ದಿ

ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್ : 6 ಮಂದಿ ಅರೆಸ್ಟ್ , 20.5 ಲಕ್ಷ ನಗದು ವಶ

 ಕೋಲಾರ, ಡಿ.23- ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಕಾರಿನಲ್ಲಿ ಅಪಹರಿಸಿ 30 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಬೆಂಗಳೂರಿನ ಆರು ಮಂದಿಯನ್ನು ಬಂಧಿಸುವಲ್ಲಿ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಕೇಂದ್ರ ವಲಯದ ಐಜಿಪಿ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದರು.

ಮೂಲತಃ ತಮಿಳುನಾಡಿನ ಬೆಂಗಳೂರಿನ ವಿನಾಯಕನಗರದಲ್ಲಿ ವಾಸಿಸುತ್ತಿರುವ ಕವಿರಾಜ್ (43), ಬೆಳ್ಳಂದೂರು-ಸರ್ಜಾಪುರ ರಸ್ತೆಯ ಅರಳೂರು ನಿವಾಸಿ, ಬಿಕಾಂ ವಿದ್ಯಾರ್ಥಿಗಳಾದ ಲಿಖಿತ್ (20), ಉಲ್ಲಾಸ್ (21), ಪ್ರವೀಣ್ (20), ಎಚ್‍ಎಸ್‍ಆರ್ ಲೇಔಟ್‍ನ ಮನೋಜ್ (20), ಅಗದೂರಿನ ರಾಘವೇಂದ್ರ (34) ಬಂಧಿತ ಆರೋಪಿಗಳು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ವಿವರಣೆ ನೀಡಿದರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಇನೋವಾ ಕಾರು, ಎರಡು ಮಾರುತಿ ಸ್ವಿಫ್ಟ್ ಕಾರು, ಒಂದು ಮಾರುತಿ ರಿಟ್ಜ್ ಕಾರು, ಕೆಟಿಎಂ ಡ್ಯೂಕ್ ಬೈಕ್, ಮಾರಕಾಸ್ತ್ರಗಳು ಮತ್ತು 20.5 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ ಎಂದರು. ನ.25ರಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಚಾಲಕ ಸುನಿಲ್ ಎಂಬಾತನೊಂದಿಗೆ ಬೆಗ್ಲಿ ಹೊಸಹಳ್ಳಿ ಫಾರಂ ಹೌಸ್‍ನಿಂದ ಫಾರ್ಚೂನರ್ ಕಾರಿನಲ್ಲಿ ಬರುತ್ತಿದ್ದಾಗ ಎರಡು ಕಾರುಗಳಲ್ಲಿ ಬಂದ ಎಂಟು ಮಂದಿ ಅಪಹರಣಕಾರರು ಇವರ ಕಾರನ್ನು ಅಡ್ಡಗಟ್ಟಿ ಬಲವಂತವಾಗಿ ಅಪಹರಿಸಿ 30 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ತದನಂತರ 48 ಲಕ್ಷ ರೂ.ಗಳನ್ನು ವರ್ತೂರು ಪ್ರಕಾಶ್ ಅವರ ಪರಿಚಯಸ್ಥರಿಂದ ಪಡೆದುಕೊಂಡು ನ.28ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಂದಗುಡಿ ಹೋಬಳಿ, ಶಿವನಾಪುರ ಗ್ರಾಮದ ಬಳಿ ಬಿಟ್ಟು ಅಪಹರಣಕಾರರು ಪರಾರಿಯಾಗಿದ್ದರು. ಈ ಬಗ್ಗೆ ವರ್ತೂರು ಪ್ರಕಾಶ್ ಅವರು ನೀಡಿದ ದೂರಿನ ಮೇರೆಗೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತದನಂತರ ಈ ಪ್ರಕರಣ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಪಹರಣಕಾರರ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಕೋಲಾರ ಉಪವಿಭಾಗದ ಎಎಸ್‍ಪಿ ಸಾಹಿಲ್ ಬಾಗ್ಲಾ ಅವರು ತನಿಖೆಯ ನೇತೃತ್ವ ವಹಿಸಿದ್ದರು. ಆರೋಪಿಗಳ ಪತ್ತೆಗೆ ಒಬ್ಬರು ಎಎಸ್‍ಪಿ, ಮೂವರು ಸಿಪಿಐ, ಮೂವರು ಪಿಎಸ್‍ಐ, ಇಬ್ಬರು ಎಎಸ್‍ಐ, 4 ಮಂದಿ ಹೆಡ್‍ಕಾನ್ಸ್‍ಟೆಬಲ್ ಮತ್ತು 6 ಮಂದಿ ಕಾನ್ಸ್‍ಟೆಬಲ್ ಒಳಗೊಂಡ ನಾಲ್ಕು ತಂಡಗಳನ್ನು ಎಸ್‍ಪಿ ಅವರು ನೇಮಕ ಮಾಡಿದ್ದರು.

ಈ ತಂಡ ಕಾರ್ಯಾಚರಣೆ ನಡೆಸಿ ತಮಿಳುನಾಡಿನಲ್ಲಿ ಪ್ರಮುಖ ಆರೋಪಿ ಕವಿರಾಜ್ ತಲೆಮರೆಸಿಕೊಂಡಿರುವ ಬಗ್ಗೆ ನಿಖರ ಮಾಹಿತಿ ಪಡೆದು ಒಂದು ತಂಡ ತಮಿಳುನಾಡಿಗೆ ತೆರಳಿ ಆರೋಪಿಯನ್ನು ಬೆನ್ನಟ್ಟಿ ಹಿಡಿದು ತೀವ್ರ ವಿಚಾರಣೆಗೊಳಪಡಿಸಿ ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಹುಮಾನ: ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಸೀಮಂತ್‍ಕುಮಾರ್ ಸಿಂಗ್ ಅವರು 50 ಸಾವಿರ ಬಹುಮಾನ ಘೋಷಿಸಿದ್ದಾರೆ.

TRENDING