ಬೆಳಗಾವಿ, ಡಿ. 23: ಒಂದು ವಾರದ ಹಿಂದೆ ಬ್ರಿಟನ್ ದೇಶದಿಂದ ಬೆಂಗಳೂರು ಮಾರ್ಗವಾಗಿ ಬೆಳಗಾವಿಗೆ ಆಗಮಿಸಿದ್ದ ಮಹಿಳೆಯ ಕೋವಿಡ್ ವರದಿ ನೆಗೆಟಿವ್ ಬಂದಿದ್ದು, ಇದು ಬೆಳಗಾವಿ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಕೋವಿಡ್ ವರದಿ ನೆಗೆಟಿವ್ ಇದ್ದರೂ ಮಹಿಳೆಗೆ 7 ದಿನಗಳ ಹೋಮ್ ಕ್ವಾರಂಟೈನ್ ಮಾಡಲಾಗುತ್ತದೆ. ಹೋಮ್ ಕ್ವಾರಂಟೈನ್ನಲ್ಲಿರುವಂತೆ ಬೆಳಗಾವಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಮಹಿಳೆಯು ಡಿಸೆಂಬರ್ 14ರಂದು ಲಂಡನ್ನಿಂದ ಬೆಂಗಳೂರಿಗೆ ಬಂದಿದ್ದು, ಲಂಡನ್ನಿಂದ ರಾಜ್ಯಕ್ಕೆ ಬಂದು ಈಗಾಗಲೇ 7 ದಿನಗಳ ಕಾಲ ಪೂರ್ಣವಾಗಿದೆ. RTPCR ಟೆಸ್ಟ್ನಲ್ಲಿಯೂ ಕೊರೊನಾ ವರದಿ ನೆಗೆಟಿವ್ ಬಂದಿದೆ.
ಇನ್ನು 7 ದಿನಗಳ ಕಾಲ ಮಾತ್ರ ಹೋಮ್ ಕ್ವಾರಂಟೈನ್ನಲ್ಲಿರಲು ಸೂಚನೆ ನೀಡಲಾಗಿದ್ದು, ವಿದೇಶದಿಂದ ರಾಜ್ಯಕ್ಕೆ ಆಗಮಿಸಿದವರಿಗೆ ಕೊರೊನಾ ನೆಗೆಟಿವ್ ಇದ್ದರೂ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕಿದೆ.
ಮಹಿಳೆಯ ಕೊರೊನಾ ವರದಿ ನೆಗಡಿವ್ ಬರುತ್ತಿದ್ದಂತೆಯೇ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಡಿ.14ರಂದು ಲಂಡನ್ನಿಂದ ಬೆಂಗಳೂರಿಗೆ ಬಂದಿದ್ದ 35 ವರ್ಷದ ಮಹಿಳೆ, ಬೆಂಗಳೂರಿಂದ ನೇರವಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಗೆ ತೆರಳಿದ್ದರು.
ಡಿ.14 ರಿಂದ ಡಿ.21 ರವರೆಗೆ ಜಮಖಂಡಿಯಲ್ಲೇ ಇದ್ದ ಮಹಿಳೆ, ಡಿ.22ರ ಮಧ್ಯಾಹ್ನ ಬೆಳಗಾವಿ ನಗರಕ್ಕೆ ಆಗಮಿಸಿದ್ದಳು. ಅಧಿಕಾರಿಗಳ ಸೂಚನೆ ಮೇರೆಗೆ ಕೋವಿಡ್ ಟೆಸ್ಟ್ ಮಾಡಿಸಿದ್ದು, ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ಮಹಿಳೆಯ ಕೊರೊನಾ ವರದಿ ನೆಗೆಟಿವ್ ಬಂದಿದೆ.