ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಚಾಲ್ತಿಯಲ್ಲಿದ್ದು ವೈವಿಧ್ಯ ವಿಚಾರಗಳು ಗಮನಸೆಳೆಯತೊಡಗಿವೆ. ಮತಪತ್ರಗಳ ಎಡವಟ್ಟು ಒಂದೆಡೆಯಾದರೆ, ಮತದಾರರನ್ನು ಓಲೈಸುವ ಪ್ರಯತ್ನ ಮತ್ತೊಂದೆಡೆ. ಇವೆಲ್ಲದರ ನಡುವೆ ಅಧಿಕಾರಿಯೊಬ್ಬರು ಮತದಾನ ಕೇಂದ್ರಕ್ಕೆ ರಿವಾಲ್ವರ್ ತರುವ ಮೂಲಕ ರಾಜ್ಯದ ಗಮನಸೆಳೆದಿದ್ದಾರೆ.
ಬೆಳಗಾವಿಯ ದೇಸನೂರ ಗ್ರಾಮದಲ್ಲಿ ಈ ಘಟನೆ ನಡೆದಿರುವಂಥದ್ದು. ಮತಗಟ್ಟೆ ಅಧಿಕಾರಿಯಾಗಿರುವ ಸುಲೇಮಾನ್ ಸನದಿ ಮತಗಟ್ಟೆಗೆ ರಿವಾಲ್ವರ್ ತಂದವರು. ಅಷ್ಟಕ್ಕೇ ಸುಮ್ಮನಾಗದ ಅವರು ರಿವಾಲ್ವರ್ ಅನ್ನು ಎಲ್ಲರಿಗೂ ಕಾಣುವಂತೆ ಹಿಡಿದು ಭಯದ ವಾತಾವರಣ ಸೃಷ್ಟಿಸಿದರು.
ಕೂಡಲೇ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದ್ದು, ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಸುನೀಲ್ ನಂದೇಶ್ವರ್ ಸ್ಥಳಕ್ಕಾಗಮಿಸಿ ಅಧಿಕಾರಿ ಸನದಿ ಮತ್ತು ಅವರ ಬಳಿ ಇದ್ದ ರಿವಾಲ್ವರ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ರಿವಾಲ್ವರ್ಗೆ ಪರವಾನಗಿ ಇದ್ದು, ಅದು ಸರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮತಗಟ್ಟೆಗೆ ರಿವಾಲ್ವರ್ ತಂದದ್ದೇಕೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಸನದಿ ವಿರುದ್ಧ ಶಿಸ್ತು ಕ್ರಮಕ್ಕೆ ಚುನಾವಣಾ ಅಧಿಕಾರಿಗಳು ಮುಂದಾಗಿದ್ದಾರೆ.