Friday, January 22, 2021
Home ದೆಹಲಿ ಭಾರತದಲ್ಲಿ ಪೊಲೀಯೋ ಮಾದರಿಯಲ್ಲಿ ಕೊರೊನಾ ಲಸಿಕಾ ವಿತರಣೆಗೆ ಸಿದ್ಧತೆ : ಸಚಿವ ಡಾ.ಹರ್ಷವರ್ದನ್

ಇದೀಗ ಬಂದ ಸುದ್ದಿ

ಭಾರತದಲ್ಲಿ ಪೊಲೀಯೋ ಮಾದರಿಯಲ್ಲಿ ಕೊರೊನಾ ಲಸಿಕಾ ವಿತರಣೆಗೆ ಸಿದ್ಧತೆ : ಸಚಿವ ಡಾ.ಹರ್ಷವರ್ದನ್

ನವದೆಹಲಿ, ಡಿ.18- ಕೊರೊನಾ ನಿರ್ಮೂಲನೆಗೆ ಪಲ್ಸ್ ಪೊಲೀಯೋ ಮಾದರಿಯಲ್ಲಿ ಲಸಿಕಾ ಆಂದೋಲನ ನಡೆಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಜನವರಿ ವೇಳೆಗೆ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ದನ್ ಹೇಳಿದ್ದಾರೆ. ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಲಸಿಕೆ ಆಂದೋಲನದ ಬಗ್ಗೆ ಸಮಗ್ರ ಮಾಹಿತಿ ಹಂಚಿಕೊಂಡಿದ್ದಾರೆ.

ನಮ್ಮ ದೇಶಕ್ಕೆ ಲಸಿಕಾ ಆಂದೋಲನದ ವಿಷಯವಾಗಿ ಸಾಕಷ್ಟು ಅನುಭವ ಇದೆ. 25 ವರ್ಷಗಳ ಹಿಂದೆ ಭಾರತದಲ್ಲಿ ಶೇ.60ರಷ್ಟು ಮಂದಿಗೆ ಪೊಲೀಯೋ ತಗುಲಿತ್ತು. ಕೇಂದ್ರ ಸರ್ಕಾರ ಲಸಿಕಾ ಆಂದೋಲನಾ ಆರಂಭಿಸಿತ್ತು. ಐದು ವರ್ಷದೊಳಗಿನ ಮಕ್ಕಳಿಗೆ ಒಂದೇ ದಿನ ಲಸಿಕೆ ನೀಡುವ ಆಂದೋಲನ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ದೇಶದ ಜನರು ಕೂಡ ಉತ್ತಮ ಸಹಕಾರ ನೀಡಿದ್ದಾರೆ.

ಮೊದಲ ಹಂತದಲ್ಲಿ ದೆಹಲಿಯಲ್ಲಿ ಪ್ರಥಮ ಭಾರಿಗೆ ನಡೆದ ಆಂದೋಲನ ನಂತರ ದೇಶದ ಇತರ ಭಾಗಗಳಿಗೂ ವಿಸ್ತರಣೆ ಮಾಡಲಾಯಿತು. ನಮ್ಮ ಮಾದರಿಯನ್ನು ಏಷ್ಯ ಖಂಡದ ಇತರ ದೇಶಗಳು ಅನುಸರಿಸಲಾರಂಭಿಸಿದವು. ಹಲವು ದಶಕಗಳ ಲಸಿಕಾ ಆಂದೋಲನದ ಪರಿಣಾಮ 2014ರ ವೇಳೆಗೆ ಭಾರತ ಪೊಲೀಯೋ ಮುಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ 12 ಲಸಿಕೆಗಳನ್ನು ಹಾಕಲಾಗುತ್ತಿದೆ. ನಮಗೆ ಲಸಿಕೆ ವಿತರಣೆ ಮತ್ತು ಸಾಗಾಣಿಕೆಯ ಸಾಮಥ್ರ್ಯ ಇಲ್ಲ ಎಂಬುದು ಸುಳ್ಳು. ಲಸಿಕಾ ಆಂದೋಲನ ನಡೆಸಲು ನಾವು ಪೂರ್ಣ ಪ್ರಮಾಣದ ಸಾಮಥ್ರ್ಯ ಹೊಂದಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಕೊರೊನಾ ಲಸಿಕೆ ಹಾಕಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ.

ರಾಜ್ಯ ಸರ್ಕಾರಗಳ ಜೊತೆ ಸಮನ್ವಯತೆ ಸಾಧಿಸಿ ಎಲ್ಲಾ ತಯಾರಿಗಳನ್ನು ಪೂರ್ಣಗೊಳಿಸಲಾಗಿದೆ.ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ತರಬೇತಿ ನೀಡುವ ಮಾಸ್ಟರ್ ಟ್ರೈನರ್‍ಗಳಿಗೆ ತರಬೇತಿ ನೀಡಲಾಗಿದೆ. ರಾಜ್ಯಮಟ್ಟದಲ್ಲೂ ತರಬೇತಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಈವರೆಗೂ 260 ಜಿಲ್ಲೆಗಳ 20 ಸಾವಿರ ಮಂದಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಲಸಿಕಾ ಅಂದೋಲನದಲ್ಲಿ ಕೋ-ವಿನ್ ಡಿಜಿಟಲ್ ವೇದಿಕೆ ಮಹತ್ವದ ಪಾತ್ರ ವಹಿಸಲಿದೆ. ಮೊಬೈಲ್ ಆಪ್‍ನಲ್ಲಿ ಲಸಿಕೆ ನಿಗದಿತ ಸ್ಥಳಕ್ಕೆ ತಲುಪಿದ ತಕ್ಷಣವೆ ಮಾಹಿತಿ ಲಭ್ಯವಾಗುತ್ತದೆ. ಕೋ-ವಿನ್ ಆಪ್‍ನಲ್ಲಿ ಲಸಿಕೆಯನ್ನು ಎಷ್ಟು ಡಿಗ್ರಿ ಉಷ್ಣಾಂಶದಲ್ಲಿ ಸಾಗಾಣಿಕೆ ಮಾಡಲಾಗುತ್ತಿದೆ ಎಂಬುದರ ಮೇಲೂ ನಿಗಾವಹಿಸಬಹುದು. ಲಸಿಕೆ ಪಡೆಯಬೇಕಾದವರ ವಿವರ, ಮೊದಲ ಲಸಿಕೆ ಮತ್ತು ಎರಡನೆ ಹಂತದ ಲಸಿಕೆ ಪಡೆದ ಮಾಹಿತಿಯೂ ದಾಖಲಾಗುತ್ತದೆ, ಎರಡನೇ ಹಂತದ ಲಸಿಕೆ ಅವಧಿ ಮುಗಿದ ಬಳಿಕ ತನ್ನಷ್ಟಕ್ಕೆ ತಾನೇ ದೃಢಿಕರಣ ಪತ್ರ ತಯಾರಾಗುತ್ತದೆ ಎಂದು ಹೇಳಿದ್ದಾರೆ.

ದೇಶದಲ್ಲಿ 28 ರಿಂದ 29 ಸಾವಿರ ಸಾಗಾಣಿಕೆಯ ಸರಪಳಿ ಕೇಂದ್ರಗಳಿವೆ. ಲಸಿಕೆ ಸಾಗಾಣಿಕೆಗೆ ಅಗತ್ಯವಾದ ರೆಫ್ರಿಜಿರೇಟರ್, ಮೊಬೈಲ್ ವ್ಯಾನ್, ತೀವ್ರವಾದ ಫ್ರೀಜರ್ ಸೇರಿದಂತೆ ಸಲಕರಣೆಗಳ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಲಸಿಕೆ ದಾಸ್ತಾನು ಕೇಂದ್ರಗಳಿಗೆ ಬೇಕಾದ ಪರಿಕರಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

ಲಸಿಕೆ ನಿರ್ವಹಣೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ನಿಗಾ ವಹಿಸಿದ್ದಾರೆ. ಕಾಲ ಕಾಲಕ್ಕೆ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದಾರೆ. ಈಗಾಗಲೇ ಔಷಧಿ ತಯಾರಿಕಾ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುರಕ್ಷತೆ ಮತ್ತು ಲಸಿಕೆಯ ಸಾಮಥ್ರ್ಯ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಸಚಿವರು ಸ್ಪಷ್ಟ ಪಡಿಸಿದರು.

TRENDING