ವಾಷಿಂಗ್ಟನ್, ಡಿ.21: ಅಮೆರಿಕ ತನ್ನ ಇತಿಹಾಸದಲ್ಲಿ ಕಂಡ ಅತ್ಯಂತ ಕೆಟ್ಟ ಅಧ್ಯಕ್ಷ ಎಂದು ಶೇ 42ರಷ್ಟು ಜನರು ಡೊನಾಲ್ಡ್ ಟ್ರಂಪ್ ಅವರನ್ನು ನೆನಪಿಸಿಕೊಳ್ಳುವುದಾಗಿ ಫಾಕ್ಸ್ ನ್ಯೂಸ್ ನಡೆಸಿದ ಹೊಸ ಸಮೀಕ್ಷೆ ಹೇಳಿದೆ.
ಇನ್ನು ಶೇ 8ರಷ್ಟು ಮಂದಿ ಟ್ರಂಪ್ ಆಡಳಿತವನ್ನು ಸಾಧಾರಣಕ್ಕಿಂತ ಕಡಿಮೆ ಎಂದು ಸ್ಮರಿಸುವುದಾಗಿ ತಿಳಿಸಿದ್ದರೆ, ಶೇ 22ರಷ್ಟು ಮಂದಿ ಅಮೆರಿಕ ಕಂಡ ಮಹಾನ್ ಅಧ್ಯಕ್ಷರಲ್ಲಿ ಒಬ್ಬರು ಎಂದು ಗುರುತಿಸಿದ್ದಾರೆ. ಶೇ 16ರಷ್ಟು ಜನರಿಗೆ ಟ್ರಂಪ್ ಸರಾಸರಿಗಿಂತಲೂ ಉತ್ತಮ ಆಡಳಿತಗಾರ ಎನಿಸಿದೆ.
ಟ್ರಂಪ್ ಅವರ ಆಡಳಿತಾವಧಿಯ ದಿನಗಳ ಸಮೀಪಿಸುತ್ತಿವೆ. ಹೀಗಾಗಿ ಇತಿಹಾಸಕಾರರು, ಅಮೆರಿಕನ್ನರು ಟ್ರಂಪ್ ಅವರ ಅಧ್ಯಕ್ಷಗಿರಿಯನ್ನು ಐತಿಹಾಸಿಕ ದೃಷ್ಟಿಕೋನದಿಂದ ವಿಶ್ಲೇಷಿಸಲು ಆರಂಭಿಸಿದ್ದಾರೆ. ಕೆಲವು ವರ್ಷಗಳ ಬಳಿಕ ಟ್ರಂಪ್ ಅವರನ್ನು ಅಮೆರಿಕನ್ನರು ಹೇಗೆ ನೆನಪಿಸಿಕೊಳ್ಳಬಹುದು? ಇತಿಹಾಸಕಾರರು ಮತ್ತು ಅನೇಕ ಮತದಾರರು ಟ್ರಂಪ್ ಅವರನ್ನು ಅತ್ಯಂತ ಕೆಟ್ಟ ಅಧ್ಯಕ್ಷ ಎಂದು ನೆನಪಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಉತ್ತಮ ಆಡಳಿತಗಾರರಲ್ಲಿ ಒಬ್ಬರು ಎಂದು ಅವರನ್ನು ಗುರುತಿಸಿರುವವರ ಸಂಖ್ಯೆ ತೀರಾ ಕಡಿಮೆ.
ಗೆರಾಲ್ಡ್ ಫೋರ್ಡ್ ಅವರಿಂದ ಆರಂಭಿಸಿ ಇದುವರೆಗೂ ಆಡಳಿತ ನಡೆಸಿದ ಅಧ್ಯಕ್ಷರನ್ನು ಇತಿಹಾಸ ಹೇಗೆ ನೋಡುತ್ತದೆ ಎಂಬ ಸಮೀಕ್ಷೆಗಳು ನಡೆಯುತ್ತಿವೆ. ಇದರಲ್ಲಿ ಟ್ರಂಪ್ ಅವರನ್ನು ನಕಾರಾತ್ಮಕ ಮತಗಳನ್ನು ಯಾರೂ ಪಡೆದಿಲ್ಲ. ಐದು ವರ್ಗಗಳ ಪ್ರಶ್ನೆಗಳಲ್ಲಿ ಅತಿ ಹೆಚ್ಚು ಕಡಿಮೆ ರೇಟಿಂಗ್ ಪಡೆದ ಏಕೈಕ ಅಧ್ಯಕ್ಷ ಕೂಡ. ಜಾರ್ಜ್ ಡಬ್ಲ್ಯೂ ಬುಷ್ ಅವರು ಅಧಿಕಾರ ಅಂತ್ಯಗೊಳಿಸಿದ ಬಳಿಕ ನಡೆದ ಗ್ಯಾಲಪ್ ಸಮೀಕ್ಷೆಯಲ್ಲಿ ಶೇ 36ರಷ್ಟು ಮಂದಿ ಅವರು ‘ಕಳಪೆ’ ಆಡಳಿತಗಾರ ಎಂದು ಹೇಳಿದ್ದರು.
ಬರಾಕ್ ಒಬಾಮ ಅವರನ್ನು ಕೆಟ್ಟ ಆಡಳಿತಗಾರರಲ್ಲಿ ಒಬ್ಬರು ಎಂದು ಇತಿಹಾಸ ನೆನಪಿಸಿಕೊಳ್ಳಲಿದೆ ಎಂದು ಮಾರಿಸ್ಟ್ ಕಾಲೇಜ್ ಸಮೀಕ್ಷೆಯಲ್ಲಿ ಶೇ 17ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದರು.