Tuesday, January 19, 2021
Home ಬೆಂಗಳೂರು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಗೆ ಸಿಎಂ ಬಿ.ಎಸ್. ವೈ ಮಹತ್ವದ ಸೂಚನೆ

ಇದೀಗ ಬಂದ ಸುದ್ದಿ

ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಗೆ ಸಿಎಂ ಬಿ.ಎಸ್. ವೈ ಮಹತ್ವದ ಸೂಚನೆ

 ಬೆಂಗಳೂರು,ಡಿ.21-ಮುಂದಿನ ದಿನಗಳಲ್ಲಿ ಶಿಕ್ಷಕರು ಇಲ್ಲವೇ ಶಾಲಾ ಆಡಳಿತ ಮಂಡಳಿಯವರು ಪ್ರತಿಭಟನೆ ನಡೆಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರಿಗೆ ಸೂಚಿಸಿದ್ದಾರೆ. ಇಂದು ಬೆಳಗ್ಗೆ ಕಾವೇರಿ ನಿವಾಸದಲ್ಲಿ ಸಿಎಂ ಅವರನ್ನು ಭೇಟಿಯಾಗಿದ್ದ ಸುರೇಶ್‍ಕುಮಾರ್, ಅನುದಾನ ರಹಿತ ಶಾಲಾ ಶಿಕ್ಷಕರ ಪ್ರತಿಭಟನೆ, ಶಾಲೆಗಳ ಆರಂಭಕ್ಕೆ ಪೋಷಕರ ವಿರೋಧ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.

ಈ ವೇಳೆ ಸುರೇಶ್‍ಕುಮಾರ್ ಅವರಿಗೆ ಖಾಸಗಿ ಶಾಲಾ ಆಡಳಿತ ಮಂಡಳಿ, ಅನುದಾನ ರಹಿತ ಶಿಕ್ಷಕರು, ಪೋಷಕರು ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಪದೇಪದೇ ಪ್ರತಿಭಟನೆಗಳು ನಡೆಯುತ್ತಿದ್ದರೆ ಯಾವುದೇ ಸರ್ಕಾರಕ್ಕೂ ಶೋಭೆ ತರುವುದಿಲ್ಲ. ಕಳೆದ ವಾರ ರೈತರು, ಸಾರಿಗೆ ನೌಕರರು, ಖಾಸಗಿ ಶಾಲಾ ಆಡಳಿತ ಮಂಡಳಿಯವರು ಸೇರಿದಂತೆ ಮತ್ತಿತರರು ನಿರಂತರವಾಗಿ ಪ್ರತಿಭಟನೆ ನಡೆಸಿದ ಪರಿಣಾಮ ಸರ್ಕಾರಕ್ಕೆ ಕಪ್ಪುಚುಕ್ಕೆಯಾಯಿತು.

ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರು ಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ. ಕಾಲಕಾಲಕ್ಕೆ ಅಧಿಕಾರಿಗಳು ಹಾಗೂ ಶಿಕ್ಷಕರ ಸಂಘಟನೆಗಳ ಜೊತೆ ಮುಕ್ತ ಚರ್ಚೆ ನಡೆಸಿ. ರಾಜ್ಯ ಸರ್ಕಾರ ಶಿಕ್ಷಕರ ಪರವಾಗಿ ಇದೆ ಎಂಬುದನ್ನು ಮನವರಿಕೆ ಮಾಡಿಸಿ ಎಂದು ಬಿಎಸ್‍ವೈ ಸಲಹೆ ಮಾಡಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಕೋವಿಡ್ ಬಂದ ಪರಿಣಾಮ ಆರ್ಥಿಕ ಪರಿಸ್ಥಿತಿ ಏರುಪೇರಾಗಿದೆ. ಇಂಥ ಸಂದರ್ಭದಲ್ಲೂ ಶಿಕ್ಷಕರಿಗೆ ಒಂದೇ ಒಂದು ತಿಂಗಳು ವೇತನವನ್ನು ತಡೆ ಹಿಡಿದಿಲ್ಲ. ಖಾಸಗಿ ಶಾಲೆಯವರು ಮುಂದಿಟ್ಟಿರುವ ಬೇಡಿಕೆಗಳನ್ನು ಸದ್ಯದ ಮಟ್ಟಿಗೆ ಈಡೇರಿಸಲು ಸಾಧ್ಯವಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ಮನವರಿಕೆ ಮಾಡಿ. ಶಾಲೆಗಳನ್ನು ಆರಂಭಿಸುತ್ತಿರುವ ಉದ್ದೇಶವನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಿ ಎಂದು ಹೇಳಿದ್ದಾರೆ.

TRENDING