ಲಖನೌ: ಕಳೆದ ವರ್ಷ ಸುಪ್ರೀಂಕೋರ್ಟ್ ನೀಡಿದ್ದ ಐತಿಹಾಸಿಕ ಅಯೋಧ್ಯೆ ತೀರ್ಪಿನ ಅನ್ವಯ, ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿರುವ ಇಂಡೋ–ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್, ಈ ಯೋಜನೆಯ ನೀಲಿ ನಕ್ಷೆಯನ್ನು ಬಿಡುಗಡೆ ಮಾಡಿದೆ.
ಯೋಜನೆಯ ಮೊದಲ ಹಂತದಲ್ಲಿ ಭವ್ಯ ಮಸೀದಿ ಹಾಗೂ ವಿಶಾಲ ಆಸ್ಪತ್ರೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಎರಡನೇ ಹಂತದಲ್ಲಿ ಆಸ್ಪತ್ರೆಯನ್ನು ವಿಸ್ತರಿಸುವ ಯೋಜನೆ ರೂಪಿಸಲಾಗಿದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಸ್ಪಷ್ಟಪಡಿಸಿದೆ.
ಮುಂದಿನ ವರ್ಷ ಅಯೋಧ್ಯಾ ಮಸೀದಿ ಹಾಗೂ ಆಸ್ಪತ್ರೆಯ ಶಿಲಾನ್ಯಾಸ ಕಾರ್ಯಕ್ರಮ ನಡೆಸಲಾಗುವುದು. ಶೀಘ್ರದಲ್ಲೇ ಈ ಮಸೀದಿಯ ಹೆಸರನ್ನೂ ನಿರ್ಧರಿಸಲಾಗುವುದು ಎಂದು ಫೌಂಡೇಶನ್ ಮಾಹಿತಿ ನೀಡಿದೆ.
ಐದು ಎಕರೆ ಜಾಗದ ಕಟ್ಟಡ ಯೋಜನೆಯನ್ನು ಲಖನೌದ ಐಐಸಿಎಫ್ ಟ್ರಸ್ಟ್ ಕಚೇರಿಯಲ್ಲಿ ಪ್ರಾಧ್ಯಾಪಕ ಎಸ್.ಎಂ. ಅಖ್ತರ್ ಬಿಡುಗಡೆಗೊಳಿಸಿದರು. ಈ ವಿನ್ಯಾಸ ಪ್ರಪಂಚದಾದ್ಯಂತ ಇರುವ ಮಸೀದಿಗಳ ಆಧುನಿಕ ವಾಸ್ತುಶಿಲ್ಪವನ್ನು ಪ್ರತಿಧ್ವನಿಸುತ್ತದೆ ಎಂದು ಐಐಸಿಎಫ್ ಟ್ರಸ್ಟ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.