Friday, January 22, 2021
Home ಕೋವಿಡ್-19 ಕೋವಿಡ್‌-19 ಲಸಿಕೆ ಹಾಕಿಸಿಕೊಂಡ ಇಸ್ರೇಲ್‌ ಪ್ರಧಾನಿ ನೆತನ್ಯಾಹು

ಇದೀಗ ಬಂದ ಸುದ್ದಿ

ಕೋವಿಡ್‌-19 ಲಸಿಕೆ ಹಾಕಿಸಿಕೊಂಡ ಇಸ್ರೇಲ್‌ ಪ್ರಧಾನಿ ನೆತನ್ಯಾಹು

 ಇಸ್ರೇಲ್‌: ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್‌ ನೆತನ್ಯಾಹು ಕೋವಿಡ್‌-19 ಲಸಿಕೆ ಹಾಕಿಸಿಕೊಳ್ಳುವ ಮೂಲಕ ರಾಷ್ಟ್ರವ್ಯಾಪಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಟೆಲ್‌ ಅವಿವ್ ಸಮೀಪದ ರಮಾತ್‌ ಗಾನ್‌ನಲ್ಲಿರುವ ಶೇಬಾ ವೈದ್ಯಕೀಯ ಕೇಂದ್ರದಲ್ಲಿ ಪ್ರಧಾನಿ ನೆತನ್ಯಾಹು (71) ಮತ್ತು ಇಸ್ರೇಲ್‌ನ ಆರೋಗ್ಯ ಸಚಿವರು ಫೈಝರ್‌-ಬಯೊಎನ್‌ಟೆಕ್‌ ಲಸಿಕೆ ಪಡೆದುಕೊಂಡರು. ಶನಿವಾರ ಈ ಕಾರ್ಯಕ್ರಮ ಟಿವಿ ಚಾನೆಲ್‌ನಲ್ಲಿ ನೇರ ಪ್ರಸಾರವಾಗಿದೆ.

‘ಆರೋಗ್ಯ ಸಚಿವ ಯುಲಿ ಎಡೆಲ್‌ಸ್ಟೀನ್‌ ಅವರೊಂದಿಗೆ ನಾನು ಲಸಿಕೆ ಪಡೆಯುವ ಮೂಲಕ ಲಸಿಕೆ ಹಾಕಿಸಿಕೊಳ್ಳಲು ವೈಯಕ್ತಿಕ ಉದಾಹರಣೆಯಾಗಿದ್ದು, ನಿಮ್ಮನ್ನೂ ಪ್ರೋತ್ಸಾಹಿಸುತ್ತಿದ್ದೇನೆ’ ಎಂದು ನೆತನ್ಯಾಹು ಟಿವಿ ವೀಕ್ಷಕರಿಗೆ ಹೇಳಿದ್ದಾರೆ.

ಮೂರು ವಾರಗಳಲ್ಲಿ ಕೊರೊನಾ ವೈರಸ್‌ ಎದುರಿನ ಹೋರಾಟಕ್ಕಾಗಿ ಎಲ್ಲರಿಗೂ ಲಸಿಕೆ ದೊರೆಯಲಿದೆ ಎಂದು ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ಫೆಬ್ರುವರಿಯಲ್ಲಿ ಕೋವಿಡ್‌-19 ದೃಢಪಟ್ಟ ಮೊದಲ ಪ್ರಕರಣ ದಾಖಲಾಗಿತ್ತು. ಆರೋಗ್ಯ ಸಚಿವಾಲಯದ ಪ್ರಕಾರ, ಈವರೆಗೂ ಸುಮಾರು 3,70,000 ಕೋವಿಡ್‌ ಪ್ರಕರಣಗಳು ದಾಖಲಾಗಿವೆ ಹಾಗೂ 3,000 ಮಂದಿ ಮೃತಪಟ್ಟಿದ್ದಾರೆ.

ಭಾನುವಾರದಿಂದಲೇ ಆರೋಗ್ಯ ಕಾರ್ಯಕರ್ತರಿಗಾಗಿ ಇಸ್ರೇಲ್‌ನ 10 ಆಸ್ಪತ್ರೆಗಳು ಹಾಗೂ ಲಸಿಕೆ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಲಭ್ಯವಿರಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್‌ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ನೆತನ್ಯಾಹು ಅವರು ಐದು ದಿನಗಳು ಪ್ರತ್ಯೇಕ ವಾಸದಲ್ಲಿದ್ದರು. ಅವರಿಗೆ ಪರೀಕ್ಷೆಯಲ್ಲಿ ಕೋವಿಡ್‌ ನೆಗೆಟಿವ್‌ ಬಂದಿತ್ತು.

ಇಸ್ರೇಲ್‌ ಫೈಝರ್‌-ಬಯೊಎನ್‌ಟೆಕ್‌ನಿಂದ 80 ಲಕ್ಷ ಡೋಸ್‌ಗಳಷ್ಟು ಕೋವಿಡ್‌-19 ಲಸಿಕೆಗೆ ಬೇಡಿಕೆ ಇಟ್ಟಿದ್ದು, ಹತ್ತು ದಿನಗಳ ಮುಂಚೆಯೇ ಮೊದಲ ಹಂತದಲ್ಲಿ ಲಸಿಕೆ ಪೂರೈಕೆಯಾಗಿದೆ. ಫೈಝರ್‌ ಲಸಿಕೆಯನ್ನು -70 ಡಿಗ್ರಿ ಸೆಲ್ಸಿಯಸ್‌ನಷ್ಟು ಶೀತಲ ವಾತಾವರಣದಲ್ಲಿ ಸಂಗ್ರಹಿಸಬೇಕಾದ ಸವಾಲು ಇದೆ.

ಡಿಸೆಂಬರ್‌ 8ರಂದೇ ಬ್ರಿಟನ್‌ ಸಾರ್ವಜನಿಕರಿಗೆ ಇದೇ ಕಂಪನಿಯ ಲಸಿಕೆ ಹಾಕಲು ಆರಂಭಿಸಿದೆ. ಇನ್ನೂ ಅಮೆರಿಕ, ಕೆನಡಾ ಹಾಗೂ ಸ್ವಿಡ್ಜರ್ಲೆಂಡ್‌ ಸಹ ಲಸಿಕೆಯನ್ನು ಬಳಸುತ್ತಿವೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಸೋಮವಾರ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆಯಲಿದ್ದಾರೆ.

TRENDING