Tuesday, January 26, 2021
Home ಜಿಲ್ಲೆ ಮೈಸೂರಿನಲ್ಲಿ ಪೊಲೀಸರಿಂದ ಅಪರಾಧ ತಡೆ ಕುರಿತು ಸೈಕಲ್ ಜಾಥಾ

ಇದೀಗ ಬಂದ ಸುದ್ದಿ

ಮೈಸೂರಿನಲ್ಲಿ ಪೊಲೀಸರಿಂದ ಅಪರಾಧ ತಡೆ ಕುರಿತು ಸೈಕಲ್ ಜಾಥಾ

ಮೈಸೂರು: ಅಪರಾಧ ತಡೆ ಮಾಸಾಚರಣೆ-2020ರ ಅಂಗವಾಗಿ ಪೊಲೀಸ್ ಇಲಾಖೆ, ಮೈಸೂರು ಸೈಕ್ಲೀಸ್ಟ್ ಅಸೋಸಿಯೇಷನ್, ರೆಡ್ ಎಫ್‌ಎಂ, ಕೊಲಂಬಿಯಾ ಏಷಿಯಾ ಆಸ್ಪತ್ರೆ, ಟ್ರಿಣ್ ಟ್ರಿಣ್, ಕ್ರೀಯೇಟ್ಮೆಂಟ್ ಇವೆಂಟ್, ಎಚ್.ಡಿ.ಎಫ್.ಸಿ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಸೈಕಲ್ ಜಾಥಾ ನಡೆಸಲಾಯಿತು.

ಶನಿವಾರ ಬೆಳಿಗ್ಗೆ ಇನ್ನೂರಕ್ಕೂ ಹೆಚ್ಚು ಮಂದಿ ಸೈಕಲ್ ಸವಾರರು ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂದೆ ಜಮಾಯಿಸಿದ್ದರು. ಜನರಲ್ಲಿ ಅಪರಾಧ ತಡೆ ಹಾಗೂ ತುರ್ತು ಸಹಾಯವಾಣಿ ಸಂಖ್ಯೆ-112ರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿದರು.

ಬೆಳಿಗ್ಗೆ 7 ಗಂಟೆಗೆ ಆರಂಭವಾದ ಜಾಗೃತಿ ಸೈಕಲ್ ಜಾಥಾಗೆ ಶಾಸಕ ಎಲ್.ನಾಗೇಂದ್ರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಉಪ ಪೊಲೀಸ್ ಆಯುಕ್ತರಾದ ಎ.ಎನ್.ಪ್ರಕಾಶ್‌ಗೌಡ, ಗೀತಾ ಪ್ರಸನ್ನ, ಸಂಚಾರ ವಿಭಾಗದ ಎಸಿಪಿ ಸಂದೇಶ್‌ಕುಮಾರ್ ಸಾಥ್ ನೀಡಿದರು.

ಸೈಕಲ್ ಸವಾರರು 5 ತಂಡಗಳಾಗಿ ಮೈಸೂರು ನಗರದ ಎಲ್ಲಾ ಪ್ರದೇಶಗಳಲ್ಲಿ ಅಪರಾಧ ತಡೆ ಜಾಗೃತಿ ಮತ್ತು ದೇಶಾದ್ಯಂತ ಒಂದೇ ತುರ್ತು ಕರೆ ಸಂಖ್ಯೆ 112 ಬಗ್ಗೆ ಕರಪತ್ರ ಹಂಚುವುದರ ಮೂಲಕ ಜನ ಜಾಗೃತಿ ಮೂಡಿಸಿದರು. ಪ್ರಮುಖ ರಸ್ತೆಗಳಲ್ಲಿ ನೂರಾರು ಸೈಕಲ್ ಸವಾರರನ್ನು ಕಂಡ ಸಾರ್ವಜನಿಕರು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸಿದರು.

ದೇಶಾದ್ಯಂತ ಒಂದೇ ತುರ್ತು ಕರೆ ಸಂಖ್ಯೆ 112ರ ಜಾಗೃತಿಗೆ ಇದೇ ವೇಳೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಕನ್ನಡದಲ್ಲಿ ಸಹಿ ಮಾಡುವ ಮೂಲಕ ಚಾಲನೆ ನೀಡಿದರು. ರೆಡ್ ಎಫ್‌ಎಂ ಆರ್‌ಜೆ ರಶ್ಮಿ, ಗೌತಮ್ ದಾಸ್, ಡಾ.ಉಪೇಂದ್ರ ಶೆಣೈ, ಸ್ಟೇಶನ್ ಹೆಡ್ ರೆಡ್ ಎಫ್‌ಎಂ ರಾಘವ್, ಇನ್ಸ್‌ಪೆಕ್ಟರ್ ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಜಾಥಾದಲ್ಲಿ ಪಾಲ್ಗೊಂಡಿದ್ದ ಸೈಕಲ್ ಸವಾರರು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಹೊರಟು ಆಲ್ಬರ್ಟ್ ವಿಕ್ಟರ್ ರಸ್ತೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ, ಕಲಾಮಂದಿರ, ವಾಲ್ಮೀಕಿ ವೃತ್ತ, ಯೋಗನರಸಿಂಹಸ್ವಾಮಿ ವೃತ್ತ, ನೆಲ್ಸನ್ ಮಂಡೇಲಾ ವೃತ್ತ, ಟಿ.ಎನ್ ನರಸಿಂಹಮೂರ್ತಿ ರಸ್ತೆ, ನಾಡ ಪ್ರಭು ಕೆಂಪೇಗೌಡ ವೃತ್ತ, ಮಲೈ ಮಹದೇಶ್ವರ ರಸ್ತೆ, ರಾಮ ಸ್ವಾಮಿ ವೃತ್ತ, ಏಕಲವ್ಯ ವೃತ್ತ, ವಿಶ್ವಮಾನ ಜೋಡಿರಸ್ತೆ ಜಂಕ್ಷನ್, ಬೋಗಾದಿ ರಿಂಗ್ ರಸ್ತೆ ಜಂಕ್ಷನ್, ರಾಮಕೃಷ್ಣ ಪರಮಹಂಸ ವೃತ್ತ, ಕೆ.ಜಿ. ಕೊಪ್ಪಲು, ಮುಂತಾದ ರಸ್ತೆ ಹಾಗೂ ವೃತ್ತಗಳಲ್ಲಿ ಸಂಚರಿಸಿ ಅಪರಾಧ ತಡೆ ಬಗ್ಗೆ ಜಾಗೃತಿ ಮೂಡಿಸಿದರು.

TRENDING