Tuesday, January 26, 2021
Home ರಾಜಕೀಯ ಕಾಂಗ್ರೆಸ್‌ ಪಕ್ಷದಿಂದ ಸಿದ್ದರಾಮಯ್ಯನವರನ್ನು ಕಿತ್ತುಹಾಕಿ : ಕೆ.ಎಸ್. ಈಶ್ವರಪ್ಪ

ಇದೀಗ ಬಂದ ಸುದ್ದಿ

ಕಾಂಗ್ರೆಸ್‌ ಪಕ್ಷದಿಂದ ಸಿದ್ದರಾಮಯ್ಯನವರನ್ನು ಕಿತ್ತುಹಾಕಿ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ, ಡಿ.19- ಬೇರೆ ಪಕ್ಷದಿಂದ ಬಂದು ವಿಪಕ್ಷನಾಯಕ ಸ್ಥಾನ ಪಡೆದು ಬಳಿಕ ಮುಖ್ಯಮಂತ್ರಿ ಸ್ಥಾನದ ಅಧಿಕಾರವನ್ನೂ ಅನುಭವಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣರಾದ ಸಿದ್ದರಾಮಯ್ಯ ತಮ್ಮ ಸೋಲಿಗೆ ಕಾಂಗ್ರೆಸ್ ನವರೇ ಕಾರಣ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತು ಹಾಕಬೇಕೆಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈರೀತಿಯ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮಕ್ಕೆ ಮತ್ತು ಗುಂಪುಗಾರಿಕೆಗೆ ಗುದ್ದಲಿ ಪೂಜೆ ಮಾಡಿದಂತಾಗಿದೆ ಎಂದರು. ಕರ್ನಾಟಕದಲ್ಲಿ ಖರ್ಗೆ, ಪರಮೇಶ್ವರ್ ರಂತಹ ಹಿರಿಯ ನಾಯಕರು ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಅವರ್ಯಾರೂ ಈ ರೀತಿ ಹೇಳಿಲ್ಲ.

ಸಿದ್ದರಾಮಯ್ಯ ಸರ್ಕಾರದ ದುರಾಡಳಿತದಿಂದಾಗಿಯೇ ಅನೇಕ ನಾಯಕರು ಸೋತಿದ್ದಾರೆ. ಸೋಲು ಜನರ ತೀರ್ಪೆಂದು ಭಾವಿಸಿ ಎಲ್ಲರೂ ಸುಮ್ಮನಿಲ್ಲವೇ ಎಂದು ಪ್ರಶ್ನಿಸಿದರು. ಸಿದ್ದು ಅಧಿಕಾರಲ್ಲಿದ್ದಾಗ ನಡೆದ ಎಲ್ಲಾ ಚುನಾವಣೆಯಲ್ಲಿಯೂ ಹೀನಾಯ ಸೋಲುಂಟಾಗಿದೆ.

ಹೀಗಿರುವಾಗ ತಮ್ಮ ಸೋಲಿನ ಪರಾಮರ್ಶೆ ವೇಳೆ ಸ್ವಪಕ್ಷೀಯರ ಮೇಲೆ ಆರೋಪಿಸುವ ಅವರ ಹೇಳಿಕೆ ಹೇಡಿತನದ್ದು, ಅವರಿಗೆ ಶಕ್ತಿಯದ್ದರೆ ನಿರ್ದಿಷ್ಠವಾಗಿ ತಮ್ಮ ಸೋಲಿಗೆ ಕಾರಣರಾದವರ ಹೆಸರನ್ನು ಹೇಳಬೇಕಿತ್ತು ಎಂದರು.ತಾವು ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಒಂದು ಕಡೆ ಹೇಳುವ ಸಿದ್ದರಾಮಯ್ಯ ಮತ್ತೊಂದೆಡೆ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾನೂನನ್ನು ತೆಗೆಯುವುದಾಗಿ ಹೇಳಿರುವುದು ಹಾಸ್ಯಾಸ್ಪದ.

ಇದೇ ರೀತಿ ಜಾತಿಗಣತಿ ವರದಿ ಬಹಿರಂಗಪಡದಿರುವುದಕ್ಕೆ ಬಿಜೆಪಿ ಜೆಡಿಎಸ್ ಕಾರಣ ಎಂದು ದೂರಿದ್ದಾರೆ. ಇವರೇ ಅಧಿಕಾರದಲ್ಲಿದ್ದಾಗ ಇದನ್ನೇಕೆ ಮಾಡಲಿಲ್ಲ ಎಂದು ಕೇಳಿದರಲ್ಲದೇ ಸಿದ್ದರಾಮಯ್ಯ ಕುತಂತ್ರಿ ರಾಜಕಾರಣಿ ಎಂದರು.

ಸಿದ್ದರಾಮಯ್ಯನವರ ಮಾತುಗಳನ್ನು ಗಮನಿಸಿದರೆ ಅವರು ಕಾಂಗ್ರೆಸ್ ತೊರೆದು ಹೊಸ ಪಕ್ಷ ಕಟ್ಟುವ ಇಲ್ಲವೇ ಬೇರೆ ಪಕ್ಷಕ್ಕೆ ಸೇರುವ ಸಾಧ್ಯತೆಗಳಿವೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.

TRENDING