ಶಿವಮೊಗ್ಗ,ಡಿ.18: ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಮೂರು ವಾರದೊಳಗೆ ವರದಿ ನೀಡುವಂತೆ ಕರ್ನಾಟಕ ಹೈಕೋರ್ಟ್ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಸಿಗಂದೂರು ದೇವಾಲಯವನ್ನು ಮುಜರಾಯಿ ಇಲಾಖೆಗೆ ವಹಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಹಾಗೂ ನ್ಯಾಯಮೂರ್ತಿ ವಿಶ್ವನಾಥ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.
ದೇವಾಲಯ ನಿರ್ಮಿಸುವಾಗ ಅರಣ್ಯ ಭೂಮಿ ಒತ್ತುವರಿಯಾಗಿರುವ ಕುರಿತು ವರದಿ ನೀಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿತು. ಮೂರುವಾರದೊಳಗೆ ವರದಿ ಸಲ್ಲಿಸಬೇಕು ಹಾಗೂ ಕಟ್ಟಡದ ಕೆಲಸ ನಿಲ್ಲಿಸಲಾಗಿದೆ ಎಂದು ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿತು.
ಸಾಗರ ಸಮೀಪದ ತುಮರಿಯ ಲಕ್ಷ್ಮೀನಾರಾಯಣ ಹಾಗೂ ಇತರ ಮೂವರು ಚೌಡೇಶ್ವರಿ ದೇವಾಲಯವನ್ನು ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಹಾಗೂ ದೇವಾಲಯದಲ್ಲಿ ಪಾರ್ದರ್ಶಕತೆಯ ಕೊರತೆ ಇದೆ ಎಂದು ಅರ್ಜಿ ಸಲ್ಲಿಸಿದ್ದಾರೆ.
ಅರ್ಚಕರು, ಭಕ್ತರ ಹೊಡೆದಾಟ, ನಿರ್ವಹಣಾ ಸಮಿತಿ ರಚನೆ ಸೇರಿದಂತೆ ಕಳೆದ ಕೆಲವು ದಿನಗಳಿಂದ ಸಿಂಗದೂರು ದೇವಾಲಯ ವಿವಾದಗಳಿಂದಲೇ ಸುದ್ದಿಯಲ್ಲಿದೆ.