Wednesday, January 27, 2021
Home ಸುದ್ದಿ ಜಾಲ ಆಂಧ್ರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಸೇರಿದಂತೆ ನಾಲ್ವರು ವರ್ಗಾವಣೆ

ಇದೀಗ ಬಂದ ಸುದ್ದಿ

ಆಂಧ್ರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಸೇರಿದಂತೆ ನಾಲ್ವರು ವರ್ಗಾವಣೆ

 ನವದೆಹಲಿ: ಆಂಧ್ರಪ್ರದೇಶದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಸೇರಿದಂತೆ ನಾಲ್ವರನ್ನು ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಜೆ.ಕೆ. ಮಹೇಶ್ವರಿ ಅವರನ್ನು ಸಿಕ್ಕಿಂ ಹೈಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಶಿಫಾರಸು ಮಾಡಲಾಗಿದೆ.

ಜನರಿಂದ ಆಯ್ಕೆಯಾದ ಸರ್ಕಾರವನ್ನು ‘ಅಸ್ಥಿರಗೊಳಿಸಲು ಮತ್ತು ಉರುಳಿಸಲು’ ರಾಜ್ಯ ಹೈಕೋರ್ಟ್‌ ಅನ್ನು ಉಪಯೋಗಿಸಲಾಗುತ್ತಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಅವರಿಗೆ ಅಕ್ಟೋಬರ್‌ 6ರಂದು ದೂರು ನೀಡಿದ್ದರು. ಈ ಬೆಳವಣಿಗೆಗಳ ಬಳಿಕ ಮಹೇಶ್ವರಿ ಅವರ ವರ್ಗಾವಣೆ ಪ್ರಕ್ರಿಯೆ ನಡೆದಿದೆ.

ಆಂದ್ರಪ್ರದೇಶ ಹೈಕೋರ್ಟ್‌ಗೆ ಸಿಕ್ಕಿಂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಕೆ. ಗೋಸ್ವಾಮಿ ಅವರನ್ನು ವರ್ಗಾಯಿಸುವಂತೆ ಶಿಫಾರಸು ಮಾಡಲಾಗಿದೆ.

ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿದ್ದ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಶಿಫಾರಸು ಮಾಡಲಾಗಿದೆ.

ಐದು ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ವಿವಿಧ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿದೆ. ಇದರಲ್ಲಿ ನ್ಯಾಯಮೂರ್ತಿ ಮುರಳಿಧರ್‌ ಅವರನ್ನು ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಶಿಫಾರಸು ಮಾಡಲಾಗಿದೆ. ನ್ಯಾಯಮೂರ್ತಿ ಮುರುಳಿಧರ್‌ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗೆ ಫೆಬ್ರುವರಿ 26ರ ಮಧ್ಯರಾತ್ರಿ ವರ್ಗಾವಣೆ ಮಾಡಿದಾಗ ವಿವಾದ ಸೃಷ್ಟಿಯಾಗಿತ್ತು.

ದೆಹಲಿಯಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೂವರು ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ವಿಫಲವಾಗಿದ್ದಕ್ಕೆ ನ್ಯಾಯಮೂರ್ತಿ ಮುರುಳಿಧರ್‌ ಅವರು ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು.

TRENDING