Saturday, January 23, 2021
Home ಅಂತರ್ ರಾಷ್ಟ್ರೀಯ ಮೋದಿ, ಅಮಿತ್ ಶಾ ವಿರುದ್ಧ ಅಮೆರಿಕದಲ್ಲಿ ದಾಖಲಾಗಿದ್ದ $100 ಮಿಲಿಯನ್ ಮೊಕದ್ದಮೆ ವಜಾ

ಇದೀಗ ಬಂದ ಸುದ್ದಿ

ಮೋದಿ, ಅಮಿತ್ ಶಾ ವಿರುದ್ಧ ಅಮೆರಿಕದಲ್ಲಿ ದಾಖಲಾಗಿದ್ದ $100 ಮಿಲಿಯನ್ ಮೊಕದ್ದಮೆ ವಜಾ

 ವಾಷಿಂಗ್ಟನ್, ಡಿ. 16: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಹೂಡಲಾಗಿದ್ದ 100 ಮಿಲಿಯನ್ ಡಾಲರ್ ಮೊಕದ್ದಮೆಯನ್ನು ಅಮೆರಿಕದ ನ್ಯಾಯಾಲಯ ವಜಾಗೊಳಿಸಿದೆ. ದಾವೆದಾರರಾದ ಪ್ರತ್ಯೇಕವಾದಿ ಕಾಶ್ಮೀರ ಖಲಿಸ್ತಾನ್ ಸಂಘಟನೆ ಮತ್ತು ಅದರ ಇಬ್ಬರು ಸಹವರ್ತಿಗಳು ಎರಡು ನಿಗದಿತ ವಿಚಾರಣೆಗಳಿಗೆ ಹಾಜರಾಗಲು ವಿಫಲವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಬಿಡಲಾಗಿದೆ.

ಟೆಕ್ಸಾಸ್‌ನ ಹ್ಯೂಸ್ಟನ್‌ನಲ್ಲಿ ನಡೆದ ಐತಿಹಾಸಿಕ ‘ಹೌಡಿ ಮೋದಿ!’ ಕಾರ್ಯಕ್ರಮದ ಕೆಲವು ದಿನಗಳ ಮುನ್ನ 2019ರ ಸೆಪ್ಟೆಂಬರ್ 19ರಂದು ಮೊಕದ್ದಮೆ ಹೂಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸುವ ಭಾರತೀಯ ಸಂಸತ್‌ನ ನಿರ್ಧಾರವನ್ನು ಪ್ರಶ್ನಿಸಲಾಗಿತ್ತು. ಜತೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಲೆಫ್ಟಿನೆಂಟ್ ಜನರಲ್ ಕನ್ವಲ್ ಜೀತ್ ಸಿಂಗ್ ಧಿಲ್ಲೋನ್ ಅವರಿಂದ 100 ಮಿಲಿಯನ್ ಡಾಲರ್ ಪರಿಹಾರ ನೀಡಿಸುವಂತೆ ಕೋರಲಾಗಿತ್ತು.

ಧಿಲ್ಲೋನ್ ಅವರು ಪ್ರಸ್ತುತ ರಕ್ಷಣಾ ಗುಪ್ತಚರ ಸಂಸ್ಥೆಯ ಮಹಾ ನಿರ್ದೇಶಕರಾಗಿ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಅಡಿ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಆರಂಭದಲ್ಲಿ ಮೊಕದ್ದಮೆ ಹೂಡಿದ್ದರ ನಂತರ ಅರ್ಜಿದಾರ ಕಾಶ್ಮೀರ ಖಲಿಸ್ತಾನ್ ರೆಫರೆಂಡಮ್ ಫೋರಮ್ ಸಂಘಟನೆಯು ಈ ಪ್ರಕರಣದ ವಿಚಾರಣೆಗೆ ಬೇರೆ ಯಾವ ಪ್ರಯತ್ನವನ್ನೂ ಮಾಡಿಲ್ಲ. ಅಲ್ಲದೆ ಎರಡು ಬಾರಿ ನಿಗದಿಗೊಳಿಸಿದ್ದ ವಿಚಾರಣೆಗಳಿಗೂ ಹಾಜರಾಗಲು ವಿಫಲವಾಗಿದೆ ಎಂದ ಅಮೆರಿಕದ ಟೆಕ್ಸಾಸ್ ದಕ್ಷಿಣ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಫ್ರಾನ್ಸಸ್ ಎಚ್ ಸ್ಟೇಸಿ, ಮೊಕದ್ದಮೆಯನ್ನು ವಜಾಗೊಳಿಸುವ ಆದೇಶದಲ್ಲಿ ಹೇಳಿದ್ದಾರೆ.

ಕಾಶ್ಮೀರ ಖಲಿಸ್ತಾನ್ ರೆಫರೆಂಡಮ್ ಫ್ರಂಟ್ ಅಲ್ಲದೆ, ‘ಟಿಎಫ್‌ಕೆ’ ಮತ್ತು ‘ಎಸ್‌ಎಂಎಸ್’ ಎಂಬ ಗುಪ್ತ ಹೆಸರಿನ ಇಬ್ಬರು ಕೂಡ ಈ ಮೊಕದ್ದಮೆ ದಾಖಲಿಸಿದ್ದರು. ಅವರ ಹೆಸರನ್ನು ಬಹಿರಂಗಪಡಿಸಿಲ್ಲ. ಪ್ರತ್ಯೇಕತಾವಾದಿ ವಕೀಲ ಗುರುಪಟ್ವಂತ್ ಸಿಂಗ್ ಪನ್ನಂ ಅವರನ್ನು ಪ್ರತಿನಿಧಿಸಿದ್ದರು.

TRENDING