Saturday, January 16, 2021
Home ಜಿಲ್ಲೆ ಚಾಮರಾಜನಗರ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಗಿದ ಮಹಾ ಜ್ಯೋತಿ

ಇದೀಗ ಬಂದ ಸುದ್ದಿ

ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಗಿದ ಮಹಾ ಜ್ಯೋತಿ

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತೀಕ ಮಾಸದ ಜಾತ್ರೆ ಅಂಗವಾಗಿ ಸೋಮವಾರ ರಾತ್ರಿ ದೀಪದ ಗಿರಿ ಒಡ್ಡುವಿನಲ್ಲಿ ಮಹಾಜ್ಯೋತಿ ಬೆಳಗಲಾಯಿತು. ನಂತರ ಮಹದೇಶ್ವರ ಸ್ವಾಮಿಯ ತೆಪ್ಪೋತ್ಸವದೊಂದಿಗೆ ಜಾತ್ರೆಗೆ ತೆರೆ ಎಳೆಯಲಾಯಿತು.

ಕಾರ್ತೀಕ ಜಾತ್ರೆ ಅಂಗವಾಗಿ ಶನಿವಾರದಿಂದಲೇ ಬೆಟ್ಟದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಆರಂಭವಾಗಿದ್ದವು. ಕೋವಿಡ್‌ ಕಾರಣಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಕಡೇ ಕಾರ್ತೀಕ ಸೋಮವಾರದ ಅಮಾವಾಸ್ಯೆ ದಿನವೂ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಹಾಗೂ ಮಜ್ಜನದ ಸೇವೆಗಳನ್ನು ವಿಧಿವಿಧಾನದೊಂದಿಗೆ ನೆರವೇರಿಸಲಾಯಿತು.

ರಾತ್ರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ, ಆವರಣದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ನಂತರ ದೀಪದಗಿರಿ ಒಡ್ಡುವಿಗೆ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿ. ಅಲ್ಲಿ ಉತ್ಸವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾ ಜ್ಯೋತಿಯನ್ನು ಬೆಳಗಿಸಲಾಯಿತು. ಆ ನಂತರ ದೊಡ್ಡಕೆರೆಯಲ್ಲಿ ಮಹದೇಶ್ವರ ಸ್ವಾಮಿಯ ತೆಪ್ಪೋತ್ಸವ ನಡೆಯಿತು.

ಸ್ಥಳೀಯರು ಭಾಗಿ: ಸಾಮಾನ್ಯವಾಗಿ ಕಾರ್ತೀಕ ಮಾಸದ ಜಾತ್ರೆಗೆ ಲಕ್ಷಾಂತರ ಭಕ್ತರು ಸೇರುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾದಪ್ಪನ ದರ್ಶನ ಪಡೆಯುತ್ತಾರೆ. ದೇವಾಲಯದ ಮುಂಭಾಗದಲ್ಲಿ ಸಣ್ಣ ದೀಪಗಳನ್ನು ಹಚ್ಚುವುದರ ಮೂಲಕ ತಮ್ಮ ಹರಕೆಯನ್ನು ನೆರವೇರಿಸುತ್ತಾರೆ. ಕೊನೆಯ ಕಾರ್ತೀಕ ಸೋಮವಾರದಂದು ಜರುಗುವ ಮಹಾ ಜ್ಯೋತಿ ಉತ್ಸವದಲ್ಲಿ ಪಾಲ್ಗೊಂಡು ಮಹಾ ಜ್ಯೋತಿ ದೀಪಕ್ಕೆ ತಮ್ಮ ಕೈಲಾದಷ್ಟು ಎಣ್ಣೆ ಎರೆದು ತಮ್ಮ ಹರಕೆ ತೀರಿಸುತ್ತಾರೆ.

ಈ ಬಾರಿ ಕೋವಿಡ್‌ ಕಾರಣದಿಂದ ನಿರ್ಬಂಧ ವಿಧಿಸಿದ್ದರಿಂದ ಭಕ್ತರು ಇರಲಿಲ್ಲ. ಸ್ಥಳೀಯರು ಹಾಗೂ ದೇವಾಲಯದ ಸಿಬ್ಬಂದಿ ಈ ಉತ್ಸವಗಳಲ್ಲಿ ಪಾಲ್ಗೊಂಡರು.

ಶನಿವಾರದಿಂದ ಸೋಮವಾರದವರೆಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮಂಗಳವಾರದಿಂದ ದೇವಾಲಯ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ.

TRENDING