ಧಾರವಾಡ: ಇಲ್ಲಿನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ್ಗೌಡರ ಕೊಲೆ ಕೇಸ್ನಲ್ಲಿ ಈಗಾಗಲೇ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದ್ದಾರೆ. ಇದೀಗ ಇವರ ಸೋದರ ಮಾವ ಚಂದ್ರಶೇಖರ ಇಂಡಿ ಜೈಲು ಪಾಲಾಗಿದ್ದಾರೆ.
ಯೋಗೀಶ್ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವಿಜಯಪುರದಲ್ಲಿ ಸಿಬಿಐ ಪೊಲೀಸರ ಚಂದ್ರಶೇಖರ ಇಂಡಿಯನ್ನ ಬಂಧಿಸಿ ಧಾರವಾಡಕ್ಕೆ ಕರೆತಂದಿದ್ದರು.
ಯೋಗೀಶ್ಗೌಡರ ಹತ್ಯೆಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪ ಚಂದ್ರಶೇಖರ ಇಂಡಿ ಮೇಲಿದೆ. ಈ ಸಂಬಂಧ ಇವರನ್ನು 5-6 ಬಾರಿ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಅಕ್ರಮ ಶಸ್ತ್ರಾಸ್ತ್ರವನ್ನು ಭೀಮಾ ತೀರದಿಂದ ಸಂಗ್ರಹಿಸಲಾಗಿತ್ತು ಎಂದು ತಿಳಿದುಬಂದಿದೆ.
ಸೋಮವಾರ ವಿಚಾರಣೆ ನಡೆಸಿದ ಧಾರವಾಡ ಸಿಬಿಐ ವಿಶೇಷ ನ್ಯಾಯಾಲಯ, ಚಂದ್ರಶೇಖರ ಇಂಡಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಹೆಚ್ಚಿನ ವಿಚಾರಣೆಗಾಗಿ ಎರಡು ದಿನ ಸಿಬಿಐ ಕಸ್ಟಡಿಗೆ ನೀಡುವಂತೆ ಅಧಿಕಾರಿಗಳು ಕೋರಿದ್ದು, ಈ ಸಂಬಂಧ ನಾಳೆಗೆ(ಮಂಗಳವಾರ) ತೀರ್ಪುನ್ಯಾಯಾಧೀಶರು ಕಾಯ್ದಿರಿಸಿದ್ದಾರೆ.
ಸಿಬಿಐ ಪೊಲೀಸರಿಂದ ನ.5ರಂದು ಬಂಧನಕ್ಕೊಳಪಟ್ಟಿದ್ದ ವಿನಯ್ ಕುಲಕರ್ಣಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. 2016ರ ಜೂನ್ 15ರಲ್ಲಿ ತನ್ನದೇ ಮಾಲೀಕತ್ವದ ಉದಯ್ ಜಿಮ್ನಲ್ಲಿ ಯೋಗೀಶ್ ಗೌಡ ಬರ್ಬರವಾಗಿ ಹತ್ಯೆಯಾಗಿದ್ದರು. ಈ ಸಂಬಂಧ ಸಿಬಿಐ ವಿಚಾರಣೆ ತೀವ್ರಗೊಳಿಸಿದೆ.