Saturday, January 16, 2021
Home ಅಂತರ್ ರಾಜ್ಯ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರದ ಹಣ ಬಳಸಲ್ಲ, ಭಕ್ತರ ಹಣದಿಂದಲೇ ದೇಗುಲ ಕಾರ್ಯ ;...

ಇದೀಗ ಬಂದ ಸುದ್ದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರದ ಹಣ ಬಳಸಲ್ಲ, ಭಕ್ತರ ಹಣದಿಂದಲೇ ದೇಗುಲ ಕಾರ್ಯ ; ಟ್ರಸ್ಟ್ ಸ್ಪಷ್ಟನೆ !

 ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನೀಲನಕ್ಷೆ ಸಿದ್ದವಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಸ್ವತಃ ದೇವಾಲಯದ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ದೇಶದ ನಾನಾ ಮೂಲೆಯಿಂದ ದೇವಾಲಯ ನಿರ್ಮಾಣಕ್ಕೆ ಅಗತ್ಯ ವಸ್ತುಗಳು ಹರಿದು ಬರುತ್ತಿವೆ. ಈ ನಡುವೆ ಉತ್ತರಪ್ರದೇಶ ಸರ್ಕಾರವೇ ಇಡೀ ದೇವಾಲಯ ನಿರ್ಮಾಣದ ಖರ್ಚನ್ನು ಭರಿಸಲಿದೆ ಎನ್ನಲಾಗಿತ್ತು. ಆದರೆ, ಈ ಸಂಬಂಧ ಇಂದು ಪ್ರಕಟಣೆ ಹೊರಡಿಸಿರುವ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ “ಭಗವಾನ್ ರಾಮನ ದೇವಾಲಯ ನಿರ್ಮಾಣ್ಕೆ ನಾವು ಸರ್ಕಾರದಿಂದ ಹಣವನ್ನು ಸ್ವೀಕರಿಸುವುದಿಲ್ಲ. ಬದಲಾಗಿ ರಾಮನ ಭಕ್ತರಿಂದಲೇ ಹಣವನ್ನು ಸಂಗ್ರಹಿಸಿ ದೇವಾಲಯವನ್ನು ನಿರ್ಮಿಸುತ್ತೇವೆ” ಎಂದು ತಿಳಿಸಿದೆ.

ಇದನ್ನು ಸ್ಪಷ್ಟಪಡಿಸಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, “ಭಗವಾನ್ ರಾಮ ಭಕ್ತರ ಸ್ವಯಂಪ್ರೇರಿತ ಸಹಕಾರದಿಂದ ಮಾತ್ರ ಈ ದೇವಾಲಯವನ್ನು ನಿರ್ಮಿಸಲಾಗುವುದು” ಎಂದು ತಿಳಿಸಿದ್ದಾರೆ. ಈ ಮೂಲಕ ಭಕ್ತರ ಹಣದಿಂದಲೇ ರಾಮನ ದೇವಾಲಯ ನಿರ್ಮಾಣವಾಗುವುದು ಖಚಿತವಾಗಿದೆ. ನೀವು ಹಣವನ್ನು ಹೇಗೆ ದಾನ ಮಾಡಬಹುದು?

ರಾಮನ ಭಕ್ತರು ದೇಶದಾದ್ಯಂತ ಜನರಿಂದಲೇ ದೇಣಿಗೆ ಸ್ವೀಕರಿಸುವ ಸಲುವಾಗಿ ಯಾವುದೇ ಸಮಯದಲ್ಲಿ ಯಾವುದೇ ಭಾಗಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಜನ ರಾಮ ದೇವಾಲಯ ನಿರ್ಮಾಣಕ್ಕೆ ಯಾವುದೇ ಆರ್ಥಿಕ ಸಹಾಯ ನೀಡಬಹುದು ಎಂದು ಚಂಪತ್ ರೈ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ದೇವಾಲಯದ ನಿರ್ಮಾಣ ದೇವರ ಕೆಲಸವಾಗಿದ್ದು, ಇದಕ್ಕೆ ಹಣದ ಕೊರತೆ ಎದುರಾಗುವುದಿಲ್ಲ. ಆರ್ಥಿಕ ಪಾರದರ್ಶಕತೆ ಕಾಪಾಡುವ ಸಲುವಾಗಿ ಟ್ರಸ್ಟ್ 10, 100, 1000 ರೂ.ಗಳ ಕೂಪನ್‌ಗಳು ಮತ್ತು ರಶೀದಿಗಳನ್ನು ಮುದ್ರಿಸಿದೆ. ಈ ಕೂಪನ್‌ಗಳನ್ನು ದಾನಿಗಳಿಂದ ದೇಣಿಗೆ ಪಡೆದ ನಂತರ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

 ವಿಶ್ವ ಹಿಂದೂ ಪರಿಷತ್ ಸಹಯೋಗದೊಂದಿಗೆ ಮಕರ ಸಂಕ್ರಾಂತಿಯಿಂದ ಹಣ ಸಂಗ್ರಹಿಸುವ ಸಾರ್ವಜನಿಕ ಸಂಪರ್ಕ ಅಭಿಯಾನ ಪ್ರಾರಂಭವಾಗಲಿದ್ದು, ಮಾಘ ಪೂರ್ಣಿಮೆಯವರೆಗೂ ಮುಂದುವರಿಯಲಿದೆ. ಅಭಿಯಾನದ ಭಾಗವಾಗಿ ದೇಶದ ಪ್ರತಿಯೊಂದು ಮೂಲೆಯನ್ನೂ ಒಳಗೊಳ್ಳಲಾಗುವುದು ಮತ್ತು ಕಾರ್ಯಕರ್ತರು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಅಂಡಮಾನ್ ಮತ್ತು ನಿಕೋಬಾರ್, ರಾಚ್ ಆಫ್ ಕಚ್ ನಿಂದ ತ್ರಿಪುರಕ್ಕೆ ಭೇಟಿ ನೀಡಿ ಭಗವಾನ್ ರಾಮ ಭಕ್ತರಿಂದ ಹಣ ಸಂಗ್ರಹಿಸುತ್ತಾರೆ ಎಂದು ರೈ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5, 2020 ರಂದು ಅಯೋಧ್ಯೆಯ ರಾಮನ ದೇವಸ್ಥಾನಕ್ಕೆ ಅಡಿಪಾಯ ಹಾಕಿದ್ದರು. ರಾಮನ ದೇವಸ್ಥಾನದಲ್ಲಿ 1,200 ಸ್ತಂಭಗಳು ಇದ್ದು, 161 ಅಡಿ ಎತ್ತರವಿರಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಸೆಪ್ಟೆಂಬರ್‌ನಲ್ಲಿ ಘೋಷಿಸಿತ್ತು.

TRENDING