ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ಚಟುವಟಿಕೆಗಳ ನಿರ್ವಹಣೆಗಾಗಿ ರಚಿಸಿರುವ ನಾಲ್ವರು ಸದಸ್ಯರ ‘ಅಧ್ಯಕ್ಷೀಯ ಉದ್ಘಾಟನಾ ಸಮಿತಿ(ಪಿಐಸಿ)’ಗೆ ಭಾರತೀಯ-ಅಮೆರಿಕನ್ ಮಜು ವರ್ಗೀಸ್ ಅವರನ್ನು ನೇಮಿಸಲಾಗಿದೆ.
ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರು ಮಜು ಅವರನ್ನು ಈ ಸಮಿತಿಗೆ ನೇಮಿಸಿದ್ದಾರೆ. ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಟೋನಿ ಅಲೆನ್, ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮಜು ವರ್ಗೀಸ್, ಮತ್ತು ಉಪ ಕಾರ್ಯನಿರ್ವಾಹಕ ನಿರ್ದೇಶಕರುಗಳಾಗಿ ಎರಿನ್ ವಿಲ್ಸನ್ ಮತ್ತು ಯುವನ್ನಾ ಕಾನ್ಸೆಲಾ ಅವರನ್ನು ನೇಮಿಸಿದ್ದಾರೆ.
ಅಧಿಕಾರ ಸ್ವೀಕಾರ ಸಮಾರಂಭದ ಕಾರ್ಯಚಟುವಟಿಕೆಗಳಲ್ಲಿ ನೆರವಾಗುವ ಅವಕಾಶ ಸಿಕ್ಕಿರುವುದು ಬಹಳ ದೊಡ್ಡ ಗೌರವ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅಮೆರಿಕನ್ನರ ಆರೋಗ್ಯ ಮತ್ತು ಭದ್ರತೆಯ ದೃಷ್ಟಿಯಿಂದ ಬೈಡನ್ ಮತ್ತು ಕಮಲಾ ಅವರು ಕೈಗೊಂಡಿರುವ ಈ ಕ್ರಮ ಸಮರ್ಪಕವಾಗಿದೆ’ ಎಂದು ವರ್ಗೀಸ್ ತಿಳಿಸಿದ್ದಾರೆ.