Friday, January 15, 2021
Home ದೇಶ ಅನ್ ಲಾಕ್ 6.0 : ಡಿಸೆಂಬರ್ 1ರಿಂದ ನೂತನ ಮಾರ್ಗಸೂಚಿ

ಇದೀಗ ಬಂದ ಸುದ್ದಿ

ಅನ್ ಲಾಕ್ 6.0 : ಡಿಸೆಂಬರ್ 1ರಿಂದ ನೂತನ ಮಾರ್ಗಸೂಚಿ

ನವದೆಹಲಿ: ದೇಶದಲ್ಲಿ ಕರೊನಾ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಸ್ಥಳೀಯವಾಗಿ ಲಾಕ್​ಡೌನ್ ನಿಯಮಗಳನ್ನು ಜಾರಿಗೊಳಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡುವುದರ ಜತೆಗೆ ಅನೇಕ ನಿಯಮಗಳನ್ನು ಒಳಗೊಂಡ ಅನ್​ಲಾಕ್-6ರ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬುಧವಾರ ಬಿಡುಗಡೆ ಮಾಡಿದೆ. ಡಿಸೆಂಬರ್ 1ರಿಂದ ನೂತನ ಮಾರ್ಗಸೂಚಿ ಜಾರಿಗೆ ಬರಲಿದೆೆ. ಸದ್ಯ ಕೆಲ ಕರೊನಾ ಪ್ರಕರಣ ಉಲ್ಬಣಗೊಳ್ಳುತ್ತಿರುವುದರಿಂದ ಮುಖ್ಯವಾಗಿ ಕಣ್ಗಾವಲು, ನಿಯಂತ್ರಣ ಮತ್ತು ಕಟ್ಟುನಿಟ್ಟಾದ ಪಾಲನೆಯನ್ನು ಒಳಗೊಂಡ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ತಿಳಿಸಿದೆ.

ರಾಜ್ಯಗಳು ಕಂಟೇನ್ಮೆಂಟ್ ವಲಯಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಬಹುದು. ಆದರೆ, ಕಂಟೇನ್ಮೆಂಟ್ ವಲಯದ ಹೊರಗಿನ ಪ್ರದೇಶಗಳಲ್ಲಿ ಲಾಕ್​ಡೌನ್ ನಿಯಮಗಳನ್ನು ಜಾರಿಗೊಳಿಸುವ ಮೊದಲು ಕೇಂದ್ರದ ಅನುಮೋದನೆಯನ್ನು ಪಡೆಯುವುದು ಕಡ್ಡಾಯ ಎಂದು ಸ್ಪಷ್ಟಪಡಿಸಲಾಗಿದೆ.

ಯಾವ್ಯಾವುದಕ್ಕೆ ಅನುಮತಿ?

 • ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿ ಪಡೆದವರ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ.
 • ಶೇಕಡ 50 ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳು.
 • ಕ್ರೀಡಾಪಟುಗಳ ತರಬೇತಿಗಾಗಿ ಈಜುಕೊಳಗಳ ಬಳಕೆ.
 • ವ್ಯವಹಾರ ಉದ್ದೇಶಗಳಿಗಾಗಿ ಸಭಾಂಗಣಗಳ ಬಳಕೆ.
 • ಸಾಮಾಜಿಕ, ಧಾರ್ವಿುಕ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ವಿುಕ ಸಭೆಗಳನ್ನು ನಡೆಸಬಹುದು. ಸಭಾಂಗಣದ ಸಾಮರ್ಥ್ಯದ ಶೇ.50ರಷ್ಟು ಜನರು ಭಾಗವಹಿಸಬಹುದು.

ಪಂಜಾಬ್​ನಲ್ಲಿ ರಾತ್ರಿ ಕರ್ಫ್ಯೂ

ಪಂಜಾಬ್​ನಲ್ಲಿ ರಾತ್ರಿ ಕರ್ಫ್ಯೂ ಸೇರಿದಂತೆ ಹಲವು ಹೊಸ ನಿರ್ಬಂಧಗಳನ್ನು ಘೋಷಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್​ಗಳು ಹಾಗೂ ಮದುವೆ ಛತ್ರಗಳು ರಾತ್ರಿ 9ರ ಬಳಿಕ ಬಾಗಿಲು ಮುಚ್ಚಲಿವೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು ದ್ವಿಗುಣಗೊಳಿಸಿ -ಠಿ; 1 ಸಾವಿರ ರೂ ಹೆಚ್ಚಿಸಲಾಗಿದೆ. ಈ ನಿಯಮಗಳು ಡಿ.1ರಿಂದ ಜಾರಿಗೆ ಬರಲಿವೆ.

ದೇಶದಲ್ಲಿ 92.27 ಲಕ್ಷ ಪ್ರಕರಣ

ಭಾರತದಲ್ಲಿ ಪ್ರತಿದಿನ ಸರಾಸರಿ 45 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಒಟ್ಟು ಸಂಖ್ಯೆ 92.27 ಲಕ್ಷ ಏರಿದೆ. 1.34 ಲಕ್ಷ ಮಂದಿ ಕರೊನಾಗೆ ಬಲಿಯಾಗಿದ್ದು, ಈವರೆಗೆ 86.46 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ 4.44 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಕರೊನಾ ವಿರುದ್ಧದ ಹೋರಾಟದಲ್ಲಿ ನಾವು ಇಲ್ಲಿಯವರೆಗೆ ಸಾಧಿಸಿರುವ ಯಶಸ್ಸನ್ನು ಹಾಗೇ ಕಾಪಾಡಿಕೊಳ್ಳಬೇಕಾಗಿದೆ. ಆದಾಗ್ಯೂ ಇತ್ತೀಚೆಗೆ ಬಂದ ಸಾಲು ಸಾಲು ಹಬ್ಬಗಳಿಂದಾಗಿ ಕೆಲ ರಾಜ್ಯಗಳಲ್ಲಿ ಪ್ರಕರಣಗಳು ಏರಿಕೆ ಕಂಡಿವೆ | ಕೇಂದ್ರ ಗೃಹ ಸಚಿವಾಲಯ

ಮಾರ್ಗಸೂಚಿಗಳಲ್ಲೇನಿದೆ?

 • ಕಂಟೇನ್ಮೆಂಟ್ ವಲಯದಲ್ಲಿನ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಕಣ್ಗಾವಲು ವ್ಯವಸ್ಥೆ ಬಲಪಡಿಸಬೇಕು.
 • ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳು ತಮ್ಮದೇ ನಿರ್ಬಂಧಗಳನ್ನು ವಿಧಿಸಬಹುದು.
 • ಹೊಸದಾಗಿ ರಚಿಸಬೇಕಾದ ಕಂಟೇನ್ಮೆಂಟ್ ವಲಯಗಳ ಪಟ್ಟಿಯನ್ನು ಸೂಚಿಸಲಾಗಿರುವ ವೆಬ್​ಸೈಟ್​ನಲ್ಲಿ ಅಪ್ಲೋಡ್ ಮಾಡಬೇಕು ಮತ್ತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ನೀಡಬೇಕು.
 • ಕಂಟೇನ್ಮೆಂಟ್ ವಲಯದಲ್ಲಿ ಜನರ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಅಗತ್ಯ ಮತ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಸೌಲಭ್ಯಗಳನ್ನು ಸ್ಥಗಿತಗೊಳಿಸಬೇಕು.
 • ಕಣ್ಗಾವಲು ತಂಡಗಳು ಕಂಟೇನ್ಮೆಂಟ್ ವಲಯದಲ್ಲಿ ಮನೆ ಮನೆಗೆ ಹೋಗಿ ಕರೊನಾ ಪರೀಕ್ಷೆ ನಡೆಸಬೇಕು. ಸೋಂಕಿತ ವ್ಯಕ್ತಿಯಿದ್ದರೆ ಅವರ ಜತೆ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಕ್ವಾರಂಟೈನ್​ಗೆ ಒಳಪಡಿಸಬೇಕು.
 • ಸೋಂಕಿತರನ್ನು ಅವರ ಮನೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಪ್ರಾರಂಭಿಸಬೇಕು. ಅಗತ್ಯವಿದ್ದಲ್ಲಿ ಆಸ್ಪತ್ರೆಗಳಿಗೂ ದಾಖಲಿಸಬಹುದು.
 • ಕಚೇರಿಗಳಲ್ಲಿ ದೈಹಿಕ ಅಂತರವನ್ನು ಅನುಸರಿಸಬೇಕು. ಶೇಕಡ 10 ಪಾಸಿಟಿವಿಟಿ ಇರುವ ನಗರಗಳಲ್ಲಿನ ಕಚೇರಿಗಳಲ್ಲಿನ ಸಮಯ ಬದಲಿಸಿ ಹೆಚ್ಚು ಜನರು ಒಮ್ಮೆಲೆ ಕೆಲಸ ನಿರ್ವಹಿಸದಂತೆ ಕ್ರಮ ಕೈಗೊಳ್ಳಬೇಕು.

ಶೀಘ್ರ ವೈದ್ಯಕೀಯ ಕಾಲೇಜ್ ಪುನರಾರಂಭ

ಡಿಸೆಂಬರ್ 1ರಂದು ಅಥವಾ ಅದಕ್ಕೂ ಮುನ್ನ ವೈದ್ಯಕೀಯ ಕಾಲೇಜ್​ಗಳ ಪುನರಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ. ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ವೈದ್ಯಕೀಯ ಪದವೀಧರರ ತರಬೇತಿಗಾಗಿ ಸಂಯೋಜಿತ ಮೆಡಿಕಲ್ ಕಾಲೇಜ್-ಆಸ್ಪತ್ರೆಗಳಲ್ಲಿ ಕೋವಿಡ್​ಯುೕತರ ಬೆಡ್​ಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗುವುದನ್ನು ಖಾತರಿಪಡಿಸುವಂತೆಯೂ ಸಲಹೆ ಮಾಡಿದ್ದಾರೆ. ಕರೊನಾ ವೈರಸ್ ಸಾಂಕ್ರಾಮಿಕತೆಯಿಂದಾಗಿ ಮಾರ್ಚ್ ನಿಂದ ದೇಶದಾದ್ಯಂತ ಶಿಕ್ಷಣ ಸಂಸ್ಥೆಗಳು ಮುಚ್ಚಿವೆ.

ಎನ್​ಎಂಸಿ ಶಿಫಾರಸು: ಡಿಸೆಂಬರ್ 1 ಅಥವಾ ಅದಕ್ಕೂ ಮುನ್ನ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಪುನಾರಂಭಿಸಬಹುದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್​ಎಂಸಿ) ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರದ ನಿರ್ದೇಶನ ಹೊರಬಿದ್ದಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಕಾಲೇಜ್​ಗಳು ತರಗತಿ ಪುನರ್ ಆರಂಭಿಸುವಂತೆ ಎನ್​ಎಂಸಿಗೆ ಮನವಿ ಸಲ್ಲಿಸಿದ್ದವು. 2020ರ ಬ್ಯಾಚ್​ನ ಇಂಟರ್ನ್​ಗಳು ಕಡ್ಡಾಯವಾದ ಕ್ಲಿನಿಕಲ್ ತರಬೇತಿ ಪಡೆದಿಲ್ಲ. ಅದನ್ನು ಪೂರ್ಣಗೊಳಿಸದೆ ಅವರು ಪಿಜಿ-ನೀಟ್ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುವುದಿಲ್ಲ ಎಂದು ಎನ್​ಎಂಸಿ ಹೇಳಿದೆ.

TRENDING