Sunday, January 17, 2021
Home ಕೋವಿಡ್-19 ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್ ಅಲ್-ಮೆಹ್ದಿ' ಬಲಿ

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್ ಅಲ್-ಮೆಹ್ದಿ’ ಬಲಿ

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ ಸುಡಾನ್‌ನ ಕೊನೆಯ ಚುನಾಯಿತ ಪ್ರಧಾನಿಯಾಗಿದ್ದರು. 1989 ರಲ್ಲಿ ಮಿಲಿಟರಿ ದಂಗೆ ಮೆಹ್ದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿತ್ತು.

ಕಳೆದ ತಿಂಗಳು ಸಾದಿಕ್ ಅಲ್-ಮೆಹ್ದಿ ಕುಟುಂಬ ಕೊರೊನಾ ಸೋಂಕಿನ ಸುದ್ದಿಯನ್ನು ದೃಢಪಡಿಸಿತ್ತು. ಮೆಹ್ದಿ ಕೊರೊನಾ ಸೋಂಕಿನಿಂದ ತೀವ್ರ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಯುಎಇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸತತವಾಗಿ ಚಿಕಿತ್ಸೆ ನೀಡುತ್ತಿದ್ದರೂ ಮೆಹ್ದಿ ದೇಹ ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಹೀಗಾಗಿ ಮೆಹ್ದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಸುಡಾನ್‌ನಲ್ಲಿ ಪ್ರಜಾಭುತ್ವವಾದಿ ರಾಜಕಾರಣ ಮಾಡಿದ್ದ ಸಾದಿಕ್ ಅಲ್-ಮೆಹ್ದಿ ಸಾಕಷ್ಟು ಪ್ರಭಾವಿ ನಾಯಕರಾಗಿದ್ರು. ಆದರೆ ಒಳಗೊಳಗೆ ಕುದಿಯುತ್ತಿದ್ದ ರಾಜಕೀಯ ಬೆಂಕಿ, 1989 ರಲ್ಲಿ ಸ್ಫೋಟಗೊಂಡು ಮೆಹ್ದಿ ಅವರನ್ನು ಅಧಿಕಾರದ ಗದ್ದುಗೆಯಿಂದ ಉರುಳಿಸಿತ್ತು. ನಂತರ ಮೆಹ್ದಿ ಸ್ಥಾನ ಒಮರ್ ಅಲ್-ಬಶೀರ್ ಪಾಲಾಗಿತ್ತು. ಆದರೆ 2019ರಲ್ಲಿ ಇತಿಹಾಸ ಮರುಕಳಿಸಿತ್ತು. ಸುಡಾನ್‌ ಇಸ್ಲಾಮಿಕ್ ಉಮ್ಮಾ ಪಕ್ಷದ ಮುಖ್ಯಸ್ಥರಾಗಿದ್ದ ಮೆಹ್ದಿ ದಶಕಗಳ ಸೇಡು ತೀರಿಸಿಕೊಂಡಿದ್ದರು. ಒಮರ್ ಅಲ್-ಬಶೀರ್ ಸರ್ಕಾರ ಉರುಳಿಸುವಲ್ಲಿ ಮೆಹ್ದಿ ಸಕ್ಸಸ್ ಆಗಿದ್ದರು.

ಇನ್ನೆಷ್ಟು ಸಾವುಗಳು ಬೇಕು ಮಹಾಮಾರಿಗೆ..?

ಈಗಾಗಲೇ ಜಗತ್ತಿನಾದ್ಯಂತ ನೂರಾರು ಗಣ್ಯರು ಸೇರಿದಂತೆ ಸುಮಾರು 14 ಲಕ್ಷಕ್ಕೂ ಹೆಚ್ಚು ಮಂದಿ ಡೆಡ್ಲಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಆದರೆ ಕೊರೊನಾ ಮರಣ ಮೃದಂಗಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ವ್ಯಾಕ್ಸಿನ್ ಕನ್ಫರ್ಮ್ ಆಗಿದ್ದರೂ ಅದಿನ್ನು ಮಾರುಕಟ್ಟೆ ಪ್ರವೇಶ ಮಾಡಲು ಇನ್ನೂ ಕೆಲವು ವಾರಗಳೇ ಬೇಕು. ಆದರೆ ಅಮೆರಿಕ, ಯುರೋಪ್ ಸೇರಿದಂತೆ ಜಗತ್ತಿನ ಬಹುಪಾಲು ದೇಶಗಳಲ್ಲಿ 2ನೇ ಹಾಗೂ 3ನೇ ಅಲೆಯ ಹೊಡೆತ ಜೋರಾಗಿದೆ. ಪರಿಣಾಮ ಮತ್ತಷ್ಟು ಲಕ್ಷ ಜನರ ಪ್ರಾಣಪಕ್ಷಿಗೆ ಕಂಟಕ ಎದುರಾಗಿದೆ. 6 ಕೋಟಿಗೂ ಹೆಚ್ಚು ಸೋಂಕಿತರು ಜಗತ್ತಿನಾದ್ಯಂತ ಪತ್ತೆಯಾಗಿದ್ದರೆ, ಅಮೆರಿಕದಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ಸಮೀಪಿಸುತ್ತಿದೆ. ಇದು ಕೊರೊನಾ ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.

TRENDING