Thursday, January 21, 2021
Home ಬೆಂಗಳೂರು ಆರೋಗ್ಯ ಸೇತು ಆಪ್ ಇಲ್ಲದಿದ್ದರೆ ಸೌಲಭ್ಯ ನಿರಾಕರಿಸುವಂತಿಲ್ಲ: ಕರ್ನಾಟಕ HC

ಇದೀಗ ಬಂದ ಸುದ್ದಿ

ಆರೋಗ್ಯ ಸೇತು ಆಪ್ ಇಲ್ಲದಿದ್ದರೆ ಸೌಲಭ್ಯ ನಿರಾಕರಿಸುವಂತಿಲ್ಲ: ಕರ್ನಾಟಕ HC

 ಬೆಂಗಳೂರು, ಅ. 20: ಆರೋಗ್ಯ ಸೇತು ಆಪ್ ಹೊಂದಿಲ್ಲ ಎಂಬ ಒಂದೇ ಕಾರಣಕ್ಕೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಯಾವುದೇ ಅಂಗಸಂಸ್ಥೆಗಳು ನಾಗರಿಕರಿಗೆ ಯಾವುದೇ ಸೌಲಭ್ಯ ಅಥವಾ ಸೇವೆಯನ್ನು ನಿರಾಕರಿಸುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ಹೇಳಿದೆ.

ಕೊರೊನಾ ವೈರಸ್ ನಿರ್ವಹಣೆಗೆ ನೆರವಾಗುವ ಉದ್ದೇಶದಿಂದ ರೂಪಿಸಿದ ಆರೋಗ್ಯ ಸೇತು ಮೊಬೈಲ್ ಆಪ್ ಅನ್ನು ಅನೇಕ ಸಂದರ್ಭಗಳಲ್ಲಿ ಕಡ್ಡಾಯವಾಗಿ ಇರಿಸಿಕೊಳ್ಳುವಂತೆ ಸೂಚಿಸಲಾಗುತ್ತಿದೆ. ಆದರೆ ಆರೋಗ್ಯ ಸೇತು ಆಪ್ ಬಳಸುತ್ತಿಲ್ಲ ಎಂಬ ಕಾರಣಕ್ಕೆ ಯಾವ ಪ್ರಜೆಗೂ ಸರ್ಕಾರದ ಸೌಲಭ್ಯ ನಿರಾಕರಿಸುವಂತಿಲ್ಲ ಎಂದು ಕೋರ್ಟ್ ಆದೇಶ ಹೊರಡಿಸಿದೆ.

ಡಿಜಿಟಲ್ ಹಕ್ಕು ಹೋರಾಟಗಾರ ಅನಿವರ್ ಎ. ಅರವಿಂದ್ ಆರೋಗ್ಯ ಸೇತು ಆಪ್ ಕಡ್ಡಾಯ ಬಳಕೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ‘ಯಾವುದೇ ಆಪ್ ಬಳಕೆಯನ್ನು ಕಡ್ಡಾಯಗೊಳಿಸುವುದು ಖಾಸಗಿ ಹಕ್ಕು ಮತ್ತು ಇತರೆ ಮೂಲಭೂತ ಹಕ್ಕುಗಳ ಉಲ್ಲಂಘನೆ’ ಎಂದು ಆರೋಪಿಸಿದ್ದರು.

‘ಆರೋಗ್ಯ ಸೇತು ಆಪ್ ಇಲ್ಲದ ಕಾರಣಕ್ಕೆ ಸರ್ಕಾರದಿಂದ ಲಭಿಸುವ ಯಾವುದೇ ಸೌಲಭ್ಯ ಅಥವಾ ಸೇವೆಯನ್ನು ನಿರಾಕರಿಸಬಾರದು ಮತ್ತು ಈ ಅರ್ಜಿಯ ವಿಚಾರಣೆ ಮುಗಿಯುವವರೆಗೂ ಆರೋಗ್ಯ ಸೇತು ಆಪ್‌ಗೆ ಸಂಬಂಧಿಸಿದ ಯಾವುದೇ ಯೋಜನೆಗಳನ್ನು ಸರ್ಕಾರ ಮುಂದುವರಿಸಬಾರದು’ ಎಂದು ಮನವಿ ಮಾಡಿದ್ದರು.

‘ಯಾವುದೇ ಸೇವೆ ಪಡೆಯಲು ಈ ಆಪ್ ಬಳಕೆ ಕಡ್ಡಾಯವಲ್ಲ ಎಂದು ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸ್ಪಷ್ಟಪಡಿಸಿದೆ’ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಹೇಳಿದರು.

‘ಆದರೂ ಆಪ್ ಬಳಕೆಯನ್ನು ಕಡ್ಡಾಯಗೊಳಿಸಿ ಅನೇಕ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಕೇಂದ್ರ ಸರ್ಕಾರದ ಉದ್ಯೋಗಿಗಳು ಆರೋಗ್ಯ ಸೇತು ಆಪ್ ಬಳಸುವುದನ್ನು ಕಡ್ಡಾಯಗೊಳಿಸಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸುತ್ತೋಲೆ ಹೊರಡಿಸಿದೆ’ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು.

ಕೆಲವರ ಬಳಿ ಮೊಬೈಲ್ ಇಲ್ಲ, ಹಣವಿದ್ದವರೂ ಮೊಬೈಲ್ ಇರಿಸಿಕೊಳ್ಳದೆ ಇರಬಹುದು. ಅಂತಹವರಿಗೆ ಆರೋಗ್ಯ ಸೇತು ಆಪ್ ಹೇಗೆ ಕಡ್ಡಾಯ ಮಾಡುತ್ತೀರಿ? ಯಾವುದೇ ಸ್ಥಳದಲ್ಲಿ, ಯಾವುದೇ ಸೌಲಭ್ಯಕ್ಕಾಗಿ ಆಪ್ ಬಳಕೆಗೆ ಒತ್ತಾಯ ಮಾಡುವಂತಿಲ್ಲ ಎಂದು ಸೂಚಿಸಿದ ನ್ಯಾಯಾಲಯ, ಆಕ್ಷೇಪ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಕೊನೆಯ ಅವಕಾಶ ನೀಡಿ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.

TRENDING