Sunday, January 17, 2021
Home ಆರೋಗ್ಯ ಹುಬ್ಬಳ್ಳಿಯಲ್ಲಿ ಇಂದು ಖಾಸಗಿ ಆಸ್ಪತ್ರೆ ಓಪಿಡಿ ಬಂದ್

ಇದೀಗ ಬಂದ ಸುದ್ದಿ

ಹುಬ್ಬಳ್ಳಿಯಲ್ಲಿ ಇಂದು ಖಾಸಗಿ ಆಸ್ಪತ್ರೆ ಓಪಿಡಿ ಬಂದ್

ಹುಬ್ಬಳ್ಳಿ : ಪಶ್ಚಿಮ ಬಂಗಾಳದ ಎನ್‌.ಆರ್‌.ಎಸ್‌ ಆಸ್ಪತ್ರೆಯಲ್ಲಿ ವೈದ್ಯರೊಬ್ಬರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಅಖಿಲ ಭಾರತ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿರುವ ವೈದ್ಯಕೀಯ ಸೇವೆ ಬಂದ್‌ಗೆ ಧಾರವಾಡ ಜಿಲ್ಲಾ ಐಎಂಎ ಘಟಕ ಬೆಂಬಲ ವ್ಯಕ್ತಪಡಿಸಿದ್ದು ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಓಪಿಡಿ ಸೇವೆ ಸ್ಥಗಿತಗೊಂಡಿದೆ. ಕೇವಲ ತುರ್ತು ಚಿಕಿತ್ಸೆ ಮಾತ್ರ ದೊರೆಯುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಐಎಂಎ ಸ್ಥಳೀಯ ಅಧ್ಯಕ್ಷ ಡಾ.ಅಭಯ ಮಟ್ಕರ್‌ ”ಜಿಲ್ಲಾದ್ಯಂತ ವೈದ್ಯರು ಸೇವೆ ಸ್ಥಗಿತಗೊಳಿಸಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವೈದ್ಯರ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಲಿದ್ದಾರೆ. ಬೆಳಗ್ಗೆ 6ರಿಂದ ಮರುದಿನ ಬೆಳಗ್ಗೆ 6ರ ವರೆಗೆ ಎಲ್ಲ ಖಾಸಗಿ ಆಸ್ಪತೆಗಳ ಓಪಿಡಿ (ಹೊರ ರೋಗಿ ವಿಭಾಗ) ಯಾವುದೇ ವೈದ್ಯರು ಕೆಲಸದಲ್ಲಿ ಭಾಗಿಯಾಗುವುದಿಲ್ಲ. ಕೇವಲ ತುರ್ತು ಚಿಕಿತ್ಸೆ ದೊರೆಯಲಿದೆ” ಎಂದು ಸ್ಪಷ್ಟಪಡಿಸಿದರು.

ಧಾರವಾಡ ಎಸ್‌ಡಿಎಂ ಆಸ್ಪತ್ರೆ ಕೂಡ ಬಂದ್‌ಗೆ ಬೆಂಬಲ ಸೂಚಿಸಿದ್ದು, ಓಪಿಡಿ ಸ್ಥಗಿತಗೊಳಿಸಿದೆ. ಈ ಬಂದ್‌ ಪ್ರತಿಭಟನೆಯಲ್ಲಿ ಅಂದಾಜು 800 ವೈದ್ಯರು,300 ಕ್ಲಿನಿಕ್‌ಗಳು ಹಾಗೂ 50 ಆಸ್ಪತ್ರೆಗಳು ಪಾಲ್ಗೊಂಡಿವೆ. ಒಳರೋಗಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಅಗತ್ಯ ವೈದ್ಯಕೀಯ ಸೇವೆಗಳು ಎಂದಿನಂತೆ ಮುಂದುವರಿಸಲಿವೆ ಎಂದು ಡಾ. ಮಟ್ಕರ್‌ ತಿಳಿಸಿದರು.

ಓಪಿಡಿ ಸೇವೆ ಸ್ಥಗಿತಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ಬಂದ್ ವೇಳೆ ಕಿಮ್ಸ್‌ನಲ್ಲಿ ಹೆಚ್ಚುವರಿ ಸಿಬ್ಬಂದಿ

ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್‌ ಹಿನ್ನೆಲೆಯಲ್ಲಿ ರೋಗಿಗಳಿಗೆ ತೊಂದರೆ ಆಗದಂತೆ ಕಿಮ್ಸ್‌ದಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ವೈದ್ಯರ ರಜೆಗಳನ್ನು ರದ್ದುಗೊಳಿಸಿದ್ದು,ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಆಪರೇಷನ್‌ ಥಿಯೇಟರ್‌,ತುರ್ತು ಚಿಕಿತ್ಸೆ ಮತ್ತು ಓಪಿಡಿಯಲ್ಲಿ ದಿನಕ್ಕಿಂತ ಸೋಮವಾರ ಹೆಚ್ಚಿನ ವೈದ್ಯರು ಕೆಲಸ ನಿರ್ವಹಿಸಲಿದ್ದಾರೆ ಎಂದು ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್‌ ತಿಳಿಸಿದ್ದಾರೆ.

TRENDING