Monday, January 18, 2021
Home ಜಿಲ್ಲೆ ಪರಿಸರ ನಾಶಗೊಳಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ-ನ್ಯಾ.ಈಶಪ್ಪ ಕಳವಳ

ಇದೀಗ ಬಂದ ಸುದ್ದಿ

ಪರಿಸರ ನಾಶಗೊಳಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ-ನ್ಯಾ.ಈಶಪ್ಪ ಕಳವಳ

ಧಾರವಾಡ : ಮನುಷ್ಯನನ್ನೂ ಸೇರಿಕೊಂಡು ಪ್ರಾಣಿ,ಪಕ್ಷಿಗಳಿಗೆ,ಎಲ್ಲಾ ಜೀವಿಸಂಕುಲಕ್ಕೆ ಉಸಿರು ನೀಡುವ ಮಹಾತಾಯಿ ಪರಿಸರ.ಜಗತ್ತಿನಾದ್ಯಂತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ದಿನನಿತ್ಯ ಪರಿಸರ ನಾಶಗೊಳಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಜಾಗತಿಕ ತಾಪಮಾನ ಏರುತ್ತಾ ವಾತಾವರಣದಲ್ಲಿ ಅಸಮತೋಲನ ಉಂಟಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿರುವ ಈಶಪ್ಪ ಕೆ.ಭೂತೆ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವಿವಿಧ ಇಲಾಖೆಗಳು,ಸಂಘ ಸಂಸ್ಥೆಗಳ ಆಶ್ರಯದಲ್ಲಿಂದು ಬೇಲೂರು ಕೈಗಾರಿಕಾಭಿವೃದ್ಧಿ ಪ್ರದೇಶದ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ನಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ-2019 ರ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವೇ ದಶಕಗಳ ಹಿಂದೆ ಧಾರವಾಡದಲ್ಲಿ ವರ್ಷಕ್ಕೆ ಕನಿಷ್ಟ 5 ರಿಂದ 6 ತಿಂಗಳು ಕಾಲ ಮಳೆಯಾಗುತ್ತಿತ್ತು, ಚಳಿಯ ವಾತಾವರಣವಿರುತ್ತಿತ್ತು. ಈಗ ಅದು ದೊಡ್ಡ ಪ್ರಮಾಣದಲ್ಲಿ ಇಳಿಮುಖವಾಗಿದೆ. ಇದಕ್ಕೆಲ್ಲಾ ನಮ್ಮೆಲ್ಲರ ದುರಾಸೆ,ಸ್ವಾರ್ಥ ಪ್ರವೃತ್ತಿಯೇ ಕಾರಣ. ಗಿಡ ಮರ ರಕ್ಷಿಸುವ,ಬೆಳೆಸುವ ಹೊಣೆಯನ್ನು ಇಡೀ ಮಾನವ ಸಂಕುಲ ಹೊತ್ತುಕೊಳ್ಳಬೇಕಾಗಿದೆ. ಪರಿಸರ ಸಂರಕ್ಷಣೆಯ ಶಪಥ ಮಾಡಿ,ಅನುಷ್ಠಾನಗೊಳಿಸುವ ಕಾರ್ಯ ತುರ್ತಾಗಿ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಇಂದಿನಿಂದಲೇ  ಕಾರ್ಯಪ್ರವೃತ್ತರಾಗೋಣ ಎಂದು ಈಶಪ್ಪ ಕೆ.ಭೂತೆ ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್.ಚಿಣ್ಣನ್ನವರ್ ಮಾತನಾಡಿ, ಪೃಥ್ವಿಯನ್ನು ಮಾಲಿನ್ಯ ಮಾಡಿದರೆ ಬೇರೆ ಎಲ್ಲಿಯೂ ನೆಲೆ ಕಂಡುಕೊಳ್ಳಲು ಸಾಧ್ಯವಿಲ್ಲ.ಇದನ್ನು ಗಂಭೀರವಾಗಿ ಆಲೋಚಿಸಬೇಕು. ಪರಿಸರ ದಿನಕ್ಕೆ ಮಾತ್ರ ಸಸಿ ನೆಡುವ ಕಾರ್ಯ ಸೀಮಿತವಾಗಬಾರದು. ನೀರಿನ ಮಿತಬಳಕೆಗೆ ಒತ್ತು ನೀಡಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ನಾವು ಪರಿಸರ ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಪ್ರತಿಯೊಬ್ಬರೂ ಕನಿಷ್ಟ 5 ಗಿಡಗಳನ್ನು ರಕ್ಷಿಸಿ,ಬೆಳೆಸಬೇಕು. ಕೈಗಾರಿಕೆಗಳು ತಮ್ಮ ಪ್ರದೇಶದ ಕನಿಷ್ಟ ಶೇ.33 ರಷ್ಟು ನಿವೇಶನವನ್ನು ಗಿಡ ಮರ ಬೆಳೆಸಲು ಮೀಸಲಿಡುವುದು ಕಡ್ಡಾಯವಾಗಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶಕುಮಾರ್ ಮಾತನಾಡಿ, ಒಟ್ಟು ಭೂ ಪ್ರದೇಶದ ಶೇ.33 ರಷ್ಟು ಅರಣ್ಯ ಇರಬೇಕು. ಆದರೆ ನಮ್ಮ ಜಿಲ್ಲೆಯಲ್ಲಿ ಕೇವಲ ಶೇ‌.9 ರಷ್ಟು ಮಾತ್ರ ಅರಣ್ಯ ಪ್ರದೇಶವಿರುವುದು ಗಂಭೀರವಾಗಿ ಎಲ್ಲರೂ ಆಲೋಚಿಸಬೇಕಾದ ಅಗತ್ಯವಿದೆ. ಭೂ ಪ್ರದೇಶದ ಹೆಚ್ಚಳ ಸಾಧ್ಯವಿಲ್ಲ. ಆದರೆ ಅರಣ್ಯ ಪ್ರದೇಶ ಹೆಚ್ಚು ಮಾಡಬಹುದು.ಇಡೀ ಜಗತ್ತಿನಲ್ಲಿ ವರ್ಷಕ್ಕೆ 65 ಲಕ್ಷ ಜನ ವಾಯುಮಾಲಿನ್ಯದಿಂದ ಸಾವಿಗೀಡಾಗುತ್ತಿದ್ದರೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು ಐದು ಲಕ್ಷ ಮಕ್ಕಳು ಪ್ರತಿವರ್ಷ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪರಿಸರ ರಕ್ಷಣೆ ಬಗ್ಗೆ ನಮ್ಮ ಧೋರಣೆ ಬದಲಾಯಿಸಿಕೊಳ್ಳಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಪ್ರತಿ ಸೋಮವಾರ ಇನ್ನು ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರದ ಅಥವಾ ಸ್ವಂತ ವಾಹನ ಬಳಸದೇ , ಕಾಲ್ನಡಿಗೆಯಿಂದ ಇಲ್ಲವೇ ಸಾರ್ವಜನಿಕ ಬಸ್ ಗಳ ಮೂಲಕ ಕಚೇರಿಗಳಿಗೆ ಆಗಮಿಸಬೇಕು ಎಂಬ ನಿರ್ಧಾರ ಜಿಲ್ಲಾಡಳಿತ ತೆಗೆದುಕೊಂಡಿದೆ, ಇನ್ನು ಮುಂದೆ ಈ ಕಾರ್ಯ ಆಚರಣೆಗೆ ಬರಲಿದೆ. ಈಗಾಗಲೇ ಅಂತರ್ಜಲ ಸಾವಿರ ಅಡಿಗಿಂತಲೂ ಆಳಕ್ಕೆ ಇಳಿದಿದೆ. ಭೂಮಿಗೆ ನೀರುಣಿಸುವ,ಜಲಮರುಪೂರಣ ಕಾರ್ಯಗಳು ಎಲ್ಲೆಡೆ ಯಥೇಚ್ಛವಾಗಿ ನಡೆಯಬೇಕು‌. ಕಟ್ಟಡಗಳನ್ನು ಅದೇ ಮಾದರಿಯಲ್ಲಿ ಕಟ್ಟಬೇಕು. ಪ್ಲಾಸ್ಟಿಕ್ ಬಳಕೆ ಸಾಧ್ಯವಾದಷ್ಟೂ ಕಡಿಮೆ ಮಾಡಲು ನಾವು ಮುಂದಾಗಬೇಕು. ಜೂನ್ 11 ರಂದು ಸ್ವಚ್ಛ ಮೇವ ಜಯತೆ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಒಂದು ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಧಾರವಾಡದಂತಹ ಮಲೆನಾಡ ಸೆರಗಿನಲ್ಲಿಯೂ ಜಲಮೂಲಗಳು ಬತ್ತುತ್ತಿರುವುದು ಆತಂಕದ ಸಂಗತಿಯಾಗಿದೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯು ಜಿಲ್ಲೆಯಲ್ಲಿ ಈ ವರ್ಷ 307 ಚೆಕ್ ಡ್ಯಾಂಗಳನ್ನು ನಿರ್ಮಿಸುವ ಗುರಿ ಹೊಂದಿದೆ ಎಂದರು.

ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿ.ಡಿ.ಕರ್ಪೂರಮಠ, ಧಾರವಾಡ ಗ್ರೋತ್ ಸೆಂಟರ್ ನ ಶಿರೀಷ್ ಉಪ್ಪಿನ, ವಕೀಲರ ಸಂಘದ ಅಧ್ಯಕ್ಷ ಆರ್.ಯು‌.ಬೆಳ್ಳಕ್ಕಿ ಮಾತನಾಡಿದರು.

ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ,ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಇ.ಎಸ್.ಡಿಸೋಜ, ಸಿಡಾಕ್ ನಿರ್ದೇಶಕ ಬಸವರಾಜ ಗೋಟೂರ, ಬೇಲೂರು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಶ್ರೀಕಾಂತ್ ಹುಲಮನಿ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.

ಸುನಂದಾ ನಿಂಬನಗೌಡರ್,ಅನಿಲ ಮೇತ್ರಿ ಹಾಗೂ ಅನಾಥ ಮಕ್ಕಳ ಶಾಲೆಯ ವಿದ್ಯಾರ್ಥಿಗಳು,ಸಂಗಡಿಗರು ಪ್ರಾರ್ಥಿಸಿದರು. ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು, ಹಿರಿಯ ಪರಿಸರ ಅಧಿಕಾರಿ ವಿಜಯಕುಮಾರ್ ಕಡಕ್ ಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕೆ.ಎಚ್.ನಾಯಕ ನಿರೂಪಿಸಿದರು. ಉಪ ಪರಿಸರ ಅಧಿಕಾರಿ ಶೋಭಾ ಪೋಳ ವಂದಿಸಿದರು. ಸಮಾರಂಭಕ್ಕೂ ಮುನ್ನ ಬೇಲೂರು ಕೈಗಾರಿಕಾ ಪ್ರದೇಶದ ಕೆರೆ ಆವರಣದಲ್ಲಿ ನೂರಾರು ಸಸಿಗಳನ್ನು ಗಣ್ಯರು ನೆಟ್ಟರು.

TRENDING