ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೆ ಎತ್ತಿನಹೊಳೆ ಯೋಜನೆಗೆ ಹಣ ಬಿಡುಗಡೆ ಮಾಡಿರುವ ಹೆಮ್ಮೆ ನಮ್ಮದೆ ಸರ್ಕಾರದ್ದಾಗಿದೆ. ಈ ಬಾರಿ ಸಂಸದರಾಗಿ ಆಯ್ಕೆ ಮಾಡಿದರೆ ಎತ್ತಿನಹೊಳೆ ಯೋಜನೆಯನ್ನು ಮುಂದುವರೆಸಲಾಗುವುದು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಘೋಷಿಸಿದ್ದಾರೆ.
ಶನಿವಾರ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ದೇವಮೂಲೆ ಎಂದೇ ಪ್ರಸಿದ್ದಿ ಪಡೆದ ಚೇಳೂರಿನ ಚಾಕವೇಲು ಗ್ರಾಮ ಪಂಚಾಯಿತಿ ಕೇಂದ್ರದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ನಂತರ ಚೇಳೂರು ತಾಲ್ಲೂಕು ಕೇಂದ್ರ ಸ್ಥಾನದ ಎಂಜಿ ವೃತ್ತ ದ ಬಳಿ ಬಿಜೆಪಿ ಪಕ್ಷದ ವತಿಯಿಂದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಗರಣ ರಹಿತ ಜನಪರ ಕಾರ್ಯಕ್ರಮಗಳು, ಹಾಗೂ ಕಳೆದ ಚುನಾವಣೆಯಲ್ಲಿ ಅಲ್ಪ ಮತದಿಂದ ಸೋಲುಂಟಾದ ಅನುಕಂಪ ಈ ಚುನಾವಣೆಯಲ್ಲಿ ಗೆಲುವು ತಂದುಕೊಡಲಿದೆ ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಯಲು ಸೀಮೆಯ ನೀರಿನ ಬವಣೆ ನೀಗಿಸಲು ಎತ್ತಿನ ಹೊಳೆಯ ಯೋಜನೆಗೆ ಬಜೆಟ್ನಲ್ಲಿ ಅನುದಾನ ನೀಡಿದ್ದು, ಆ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಉದ್ದೇಶವಿಲ್ಲ. ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ತ್ವರಿಗತಿಯಲ್ಲಿ ಪೂರ್ಣಗೊಳಿಸಲು ಹೆಚ್ಚಿನ ಒತ್ತು ನೀಡುವುದರ ಜೊತೆ ನದಿಗಳ ಜೋಡಣೆ ಯೋಜನೆಯ ಮೂಲಕ ಶಾಶ್ವತವಾಗಿ ಬಯಲು ಸೀಮೆಯ ನೀರಿನ ಸಮಸ್ಯೆ ನೀಗಿಸುವುದಾಗಿ ಅವರು ಹೇಳಿದ್ರು.
ಯೋಜನೆ ವಿಳಂಬಗೊಳಿಸಿದ್ದೇ ಮೊಯ್ಲಿ ಸಾಧನೆ ಸಂಸದರಾಗಿ ವೀರಪ್ಪಮೊಯ್ಲಿ ಎತ್ತಿನ ಹೊಳೆ ಯೋಜನೆಯನ್ನು ಕೇವಲ ಚುನಾವಣೆಗೆ ಬಳಸಿಕೊಂಡಿದ್ದು ಬಿಟ್ಟರೆ ಯಾವ ಪ್ರಮಾಣದಲ್ಲಿ ಆ ಯೋಜನೆಯಿಂದ ನೀರು ದೊರೆಯುತ್ತದೆ. ತ್ವರಿತವಾಗಿ ಕಾಮಗಾರಿ ಮುಗಿಸಿ ಕ್ಷೇತ್ರದ ಜನತೆಗೆ ನೀರನ್ನು ಹೇಗೆ ಪೂರೈಸಬಹುದೆಂಬ ಕನಿಷ್ಟ ಕಾಳಜಿ ಇಲ್ಲವಾಗಿತ್ತು. ಸುಳ್ಳಿನ ಸರದಾರ ಎಂದೇ ಹೆಸರು ಪಡೆದ ಮೊಯ್ಲಿ 10 ವರ್ಷ ಗಳಿಂದ ಮಾಡಿದ ಸಾಧನೆಯಾದರೂ ಏನು ? ಮಾತಿನಲ್ಲೆ ಐದು ವರ್ಷಗಳ ಕಾಲ ಕಳೆದ ಮೊಯ್ಲಿಗೆ ಮತ್ತೆ ಮತ ಕೇಳುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದ್ರು.