ಸಾಕಷ್ಟು ಅಭಿವೃದ್ಧಿ ಕೆಲಸಗಳ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಛಾಪು ಮೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ,ಚುನಾವಣೆ ವೇಳೆ ಅದರ ಫಲ ಸಿಕ್ಕಿದೆ. ಈಶಾನ್ಯ ಭಾರತದ ಏಳೂ ರಾಜ್ಯಗಳಲ್ಲಿ ಪ್ರಮುಖ ಪ್ರಾದೇಶಿಕ ಪಕ್ಷಗಳು ಎನ್ ಡಿ ಎ ಮೈತ್ರಿಕೂಟಕ್ಕೆ ಜೈ ಎಂದಿವೆ. ಅಸ್ಸಾಂನಲ್ಲಿ ಬಿಜೆಪಿ ಸರಕಾರದ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದ ಅಸ್ಸಾಂ ಗಣಪರಿಷತ್ ನಿನ್ನೆ ತಡರಾತ್ರಿ ಮೈತ್ರಿಗೆ ಸಮ್ಮತಿ ಸೂಚಿಸಿದೆ. ಇದರೊಂದಿಗೆ ಈಶಾನ್ಯದ ಎಲ್ಲಾ 7 ರಾಜ್ಯಗಳಲ್ಲಿ ಬಿಜೆಪಿ ಮೈತ್ರಿ ಮಾತುಕತೆ ಅಂತ್ಯಗೊಂಡಿದೆ ಎಂದು ಬಿಜೆಪಿಯ ನಾಯಕ ರಾಮ್ ಮಾಧವ್ ಘೋಷಿಸಿದ್ದಾರೆ.
7 ರಾಜ್ಯಗಳ ಪೈಕಿ ಮೂರರಲ್ಲಿ ಬಿಜೆಪಿ ಹಾಗೂ ಎರಡರಲ್ಲಿ ಎನ್ ಡಿ ಎ ಮೈತ್ರಿಕೂಟ ಸರಕಾರವಿದೆ. ಕಳೆದ ವರ್ಷವಷ್ಟೇ ಕೆಂಪುಕೋಟೆ ತ್ರಿಪುರಾವನ್ನು ವಶಪಡಿಸಿಕೊಂಡಿದ್ದ ಬಿಜೆಪಿ, ಅಲ್ಲೂ ಮಿತ್ರಪಕ್ಷದ ಜೊತೆಗೇ ಚುನಾವಣೆ ಎದುರಿಸುವುದಾಗಿ ಘೋಷಿಸಿದೆ. ಈಶಾನ್ಯದಲ್ಲಿರುವ 25 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಈ ಮೈತ್ರಿ ನೆರವಾಗಲಿದೆ ಎಂದು ರಾಮಮಾಧವ್ ಹೇಳಿದ್ದಾರೆ.