ಒತ್ತುವರಿಗೊಳಗಾಗಿದ್ದ ಕೆರೆ ಅಂಗಳ ತೆರವುಗೊಳಿಸಿದ ಕಂದಾಯ ಇಲಾಖೆ

ಕೋಲಾರ : ಅತಿಕ್ರಮಣಕ್ಕೆ ಒಳಗಾಗಿದ್ದ ಕೆರೆ ಅಂಗಳವನ್ನು ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಬೆಂಗಾವಲಿನಲ್ಲಿ ತೆರವುಗೊಳಿಸಿದ್ದಾರೆ.

ಕೋಲಾರ ತಾಲೂಕಿನ ಹೋಳೂರು ಗ್ರಾಮದ ಹೊಸಕೆರೆ ಅಂಗಳವನ್ನು ತೆರವು ಮಾಡಲಾಗಿದೆ. ಹೋಳೂರು ಗ್ರಾಮದಲ್ಲಿ ಹೊಸದಾಗಿ ಕೆರೆ ಮಾಡಬೇಕೆಂದು 40 ವರ್ಷಗಳ ಹಿಂದೆ ಸರ್ಕಾರ ಜಾಗವನ್ನು ಗುರುತಿಸಿತ್ತು.

ಕೆರೆ ಅಭಿವೃದ್ದಿಗೊಳಿಸುವ ಜಾಗದಲ್ಲಿನ 29 ಎಕರೆ ಪ್ರದೇಶದಲ್ಲಿ ಅನುಭವದಲ್ಲಿದ್ದ ಇಪ್ಪತ್ತೊಂದು ಮಂದಿ ಕೃಷಿಕರಿಗೆ ಸರ್ಕಾರವು ಪರಿಹಾರವನ್ನು ಕೊಟ್ಟು ಜಾಗವನ್ನು ವಶಕ್ಕೆ ಪಡೆದುಕೊಂಡಿತ್ತು.

ಆದರೆ ಸ್ವಾಧೀನ ಮಾಡಿಕೊಂಡಿದ್ದ ಜಮೀನಿನಲ್ಲಿ ಸರ್ಕಾರವು ಕೆರೆಯನ್ನು ಅಭಿವೃದ್ದಿ ಮಾಡುವ ಕೆಲಸವನ್ನು ಮರೆತೇ ಬಿಟ್ಟಿತ್ತು. ರೈತರು ಕೂಡ ಅದೇ ಜಮೀನಿನಲ್ಲಿ ಕೃಷಿ ಚಟುವಟಿಕೆಯನ್ನು ಮುಂದುವರೆಸಿದ್ದರು. ಈ ಬಗ್ಗೆ ಸ್ಥಳೀಯ ರೈತರೊಬ್ಬರು ಭೂಕಬಳಿಕೆ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಕೆರೆ ಜಮೀನು ಒತ್ತುವರಿ ಆಗಿರುವುದನ್ನು ಪ್ರಶ್ನಿಸಿದ್ದರು. ಈ ಬಗ್ಗೆ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿತು.

ಈ ಕುರಿತು ಕ್ರಮ ಜರುಗಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಇಂದು ಪೊಲೀಸ್ ಬೆಂಗಾವಲಿನಲ್ಲಿ ಕೆರೆಯ ಅಂಗಳದ ಅತಿಕ್ರಮಣವನ್ನು ತೆರವುಗೊಳಿಸುವ ಕಾರ್ಯಕ್ಕೆ ಇಂದಿನಿಂದ ಚಾಲನೆ ಕೊಟ್ಟು ಜಮೀನು ಒತ್ತುವರಿ ತೆರವು ಕಾರ್ಯಾಚರಣೆಯು ಇನ್ನು ಎರಡು ದಿನಗಳು ಮುಂದುವರೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಲಕ್ಷ್ಮೀಪತಿ, ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!