ತಹಶೀಲ್ದಾರ್ ನೇತೃತ್ವದಲ್ಲಿ ಪಿಂಚಣಿ ಅದಾಲತ್ : ಕಾಟಾಚಾರದ ಕಾರ್ಯಕ್ರಮ ಎಂದ ಸಾರ್ವಜನಿಕರು

ಇಂಡಿ : ತಾಲ್ಲೂಕಿನ ಬಳ್ಳೊಳ್ಳಿ ಹೋಬಳಿ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಝಳಕಿ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಜರುಗಿತು.

ಈ ಸಂದರ್ಭದಲ್ಲಿ ಇಂಡಿ ತಾಲ್ಲೂಕಿನ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಅಧ್ಯಕ್ಷ ವಹಿಸಿ ಮಾತನಾಡಿ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಲು ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ಪಿಂಚಣಿ, ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ಪಿಂಚಣಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅರ್ಹತೆ ಉಳ್ಳವರು ಅರ್ಜಿಯನ್ನು ಸಲ್ಲಿಸುವಂತೆ ಸಲಹೆ ನೀಡಿದರು.

ಸ್ಥಳದಲ್ಲಿ ಹಾಜರಿದ್ದ ಗ್ರಾಮಸ್ಥರು ಇದು ಕೇವಲ ಕಾಟಾಚಾರಕ್ಕೆ ಆಯೋಜಿಸಿರುವ ಅದಾಲತ್ ಆಗಿದೆ. ಇಲ್ಲಿ ಯಾರೂ ಸಹ ಜನರ ಸಮಸ್ಯೆ ಕೇಳಲ್ಲ. ಜನಸಾಮಾನ್ಯರ ಪರದಾಟ ಮಾತ್ರ ತಪ್ಪಲ್ಲಾ ಎಂದು ಆರೋಪಿಸಿದರು.

ನಮ್ಮ ಸಮಸ್ಯೆ ಏನೆಂದು ಯಾರೂ ಕೇಳಲೇ ಇಲ್ಲಾ. ಒಂದು ಕಾರ್ಯಕ್ರಮ ಮಾಡಿ ಒಂದು ಪೋಟೋ ತಗೆದು ಹೋದರೆ ಹೊರತು ನಮ್ಮ ಸಮಸ್ಯೆ ಹೇಳಿಕೊಳ್ಳಲು ಅವಕಾಶವೇ ಕೊಡಲಿಲ್ಲ. ಬರಿ ಏಜೆಂಟರುಗಳ ಹಾವಳಿ ಇದೆ‌. ಎಷ್ಟೇ ಹೇಳಿದರೂ ಅವರ ಮೇಲೆ ಯಾರು ಕ್ರಮ ಜರುಗಿಸಲ್ಲಾ ಎಂದು ಮಹಿಳೆಯರು ಕಿಡಿಕಾರಿದರು.

ನೆಮ್ಮದಿ ಕೇಂದ್ರದಲ್ಲಿ ಏಜೆಂಟ್‌ಗಳ ಹಾವಳಿ ಹೆಚ್ಚಾಗಿದೆ. ಅದನ್ನು ತಡೆಯಬೇಕು. ಅಧಿಕಾರಿಗಳ್ಯಾರು ? ಏಜೆಂಟರುಗಳ್ಯಾರು ಎನ್ನುವುದೇ ತಿಳಿಯುತ್ತಿಲ್ಲ. ಆದಾಯ ಪ್ರಮಾಣ ಪತ್ರದ ಪ್ರತಿ ತೆಗೆಯಲು 500 ರಿಂದ 700 ರೂ. ವರಿಗೆ ಹಣವನ್ನು ಕೊಡಬೇಕು. ಅಲ್ಲದೇ ಪಿಂಚಣಿ ಹಣ ತಲುಪಿಸುವ ಪೋಸ್ಟ್‌ಮನ್‌ಗಳಿಗೂ ಕಮೀಷನ್ ಕೊಡಬೇಕು ಎಂದು ಖಾರವಗಿ ಆರೋಪಿಸಿದ್ದಾರೆ.

ಇಷ್ಟೆಲ್ಲಾ ಸಮಸ್ಯೆಗಳಿದ್ದು ಜನರು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಕೂಡಲೇ ಸಂಬಂದ ಪಟ್ಟ ಅಧಿಕಾರಿಗಳು ಗಮನ ಹರಿಸಿ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದರು.

-ಸಂಜಯ ಕೋಳಿ, ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!