ಕುಡಿಯುವ ನೀರು ಕೃಷಿ ಹೊಂಡಕ್ಕೆ ಅಕ್ರಮ ಸಂಪರ್ಕ : ಮಾಜಿ ಸದಸ್ಯನ ವಿರುದ್ಧ ಸ್ಥಳೀಯರ ಆಕ್ರೋಶ

ಶ್ರೀನಿವಾಸಪುರ : ಚುನಾಯಿತ ಜನಪ್ರತಿನಿಧಿಗಳಯ ಏನುಬೇಕಾದರೂ ಮಾಡಬಹುದಾ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಇದು ಬೇಲಿಯೇ ಎದ್ದು ಹೊಲ ಮೇಯ್ದ ಗಾದೆ ನೆನಪಿಸುವ ವಿಚಾರವಾಗಿದೆ. ಅದೇನೆಂಬುದನ್ನು ಮುಂದೆ ಓದಿ.
ಕುಡಿಯುವ ನೀರಿಗಾಗಿ ನಿರ್ಮಿಸಿರುವ ಓವರ್ ಟ್ಯಾಂಕ್ ಗೆ ನೀರು ಸರಬರಾಜು ಆಗುತ್ತಿದ್ದ ಕೊಳವೆಬಾವಿ ಪೈಪನ್ನು ಮಾಜಿ ಪುರಸಭಾ ಸದಸ್ಯನೊಬ್ಬ ಅಕ್ರಮವಾಗಿ ತನ್ನ ಕೃಷಿ ಹೊಂಡಕ್ಕೆ ತಿರುಗಿಸಿಕೊಂಡಿರುವ ಘಟನೆ ಶ್ರೀನಿವಾಸಪುರ ಪಟ್ಟಣದ ಇಂದಿರಾ ನಗರದಲ್ಲಿ ನಡೆದಿದೆ.
ಹೌದು, ಎಜಾಸ್ ಎಂಬುವವರೇ ಅಕ್ರಮ ಸಂಪರ್ಕ ಪಡೆದು ಪುರಸಭೆ ನೀರನ್ನು ಸ್ವಂತ ಭೂಮಿಗೆ ಬಳಸಿಕೊಳ್ಳುತ್ತಿರುವ ಪುರಸಭೆಯ ಮಾಜಿ ಸದಸ್ಯ.


ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ರಸ್ತೆಯ ರಾಜಧಾನಿ ಮಂಡಿಯ ಮುಂಬಾಗ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೊರೆಸಲಾಗಿತ್ತು. ಬೋರ್ ವೆಲ್ ನಿಂದ ಪೈಪ್ ಲೈನ್ ಮುಖಾಂತರ ಇಂದಿರಾ ನಗರ ಪಂಪ್ ಹೌಸ್‌ಗೆ ನೀರು ಸರಬರಾಜು ಮಾಡುತ್ತಿದ್ದರು. ಇತ್ತೀಚಿಗೆ ನೀರು ಕಡಿಮೆಯಾದ ಕಾರಣ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿರಬಹುದು ಎಂದು ಕೊಳವೆಬಾವಿಯ ಬಳಿ ವಾಟರ್ ಮ್ಯಾನ್ ಬಾಲಕೃಷ್ಣ ಹಾಗೂ ಸಿಬ್ಬಂದಿ ನೋಡಿದಾಗ ನೀರು ಮಾಮೂಲಿಯಂತೆ ಬರುತ್ತಿರುವುದು ಕಂಡುಬಂದಿದೆ.


ಪುರಸಭೆಯ ಮುಖ್ಯಾಧಿಕಾರಿ ಮೋಹನ್‌ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಗುರುವಾರ ಕಾರ್ಯಾಚರಣೆಗೆ ಇಳಿದಾಗ ಮುಖ್ಯ ಪೈಪ್‌ಲೈನ್ ನಿಂದ ರಸ್ತೆಯ ಪಕ್ಕದಲ್ಲಿರುವ ಪುರಸಭೆ ಮಾಜಿ ಸದಸ್ಯ ಏಜುರಿಗೆ ಸೇರಿದ ಕೃಷಿ ಹೊಂಡ ಕ್ಕೆ ನೀರು ಅಕ್ರಮವಾಗಿ ಸಂಪರ್ಕ ಪಡೆದಿರುವುದು ಕಂಡುಬಂದಿದೆ.


10 ವರ್ಷಗಳಿಂದ ಪುರಸಭೆಯಲ್ಲಿ ಸದಸ್ಯನಾಗಿದ್ದು ಈಗ ಇವರ ಪತ್ನಿ ಪುರಸಭಾ ಸದಸ್ಯರಾಗಿದ್ದಾರೆ. ಆದರೂ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಇವರಿಗೆ ತಿಳಿದಿಲ್ಲವೇ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ‌.


ಇಂದಿರಾ ನಗರದಲ್ಲಿ ಬಡಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿದ್ದು ಸಿಗುವ ನೀರನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರೆ ಇಂತಹ ಸದಸ್ಯ ಏಕೆ ಬೇಕು ? ಅವರು ಮಾಡಿರುವ ತಪ್ಪಿಗೆ ಶಿಕ್ಷೆ ಅನುಭವಿಸಲಿ ಎಂದು 22ನೇ ವಾರ್ಡ್ ಪುರಸಭಾ ಸದಸ್ಯೆ ಪಿರ್ದೋಸ್ಉನ್ನಿಸ ಆಕ್ರೋಶ ವ್ಯಕ್ತಪಡಿಸಿದರು.


ಇಂದಿರಾ ನಗರದ ನಿವಾಸಿಗಳಾದ ಫೈರೋಜ್ ಪಾಷಾ(ಡಿಜೆ) ಮಾತನಾಡಿದರು. ಈ ಸಂದರ್ಭದಲ್ಲಿ ಇಂದಿರಾ ನಗರದ ನಿವಾಸಿಗಳು ಹಾಜರಿದ್ದು ನಮಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ. ಇಂತಹ ದೊಡ್ಡ ವ್ಯಕ್ತಿಗಳು ಅಧಿಕಾರದಲ್ಲಿ ಇದ್ರು ಕೂಡ ಬಡಬಗ್ಗರ ಬಗ್ಗೆ ಕಾಳಜಿ ವಹಿಸದೇ ತಮ್ಮ ಕೃಷಿ ಹೊಂಡಕ್ಕೆ ಪುರಸಭೆಯ ನೀರನ್ನು ಬಿಟ್ಟುಕೊಂಡು ಇಂದಿರಾ ನಗರದ ಬಡಕುಟುಂಬಗಳಿಗೆ ನೀರಿಲ್ಲದಂತೆ ಮಾಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ‌.

ಇನ್ನಾದ್ರು ಸಂಬಂಧ ಪಟ್ಟವರು ಇತ್ತ ಗಮನ ಹರಿಸಿ ಜನರಿಗೆ ಎದುರಾಗಿರುವ ನೀರಿನ ಸಮಸ್ಯೆಗೆ ಪರಿಹಾರ ಕೊಡಿಸುತ್ತಾರಾ ಎಂದು ಕಾದು ನೋಡಬೇಕಿದೆ.

-ರಾಮಪ್ಪ, ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!