ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಕರ ತರಬೇತಿ ಕಾರ್ಯಕ್ರಮ

ಕೊಳ್ಳೇಗಾಲ : ಕೃಷಿ ಇಲಾಖೆ ಹಾಗೂ ನಗರದ ಜೆ.ಎಸ್.ಬಿ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಕೊಳ್ಳೇಗಾಲ ತಾಲ್ಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಕರ ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಬೀಜಾಮೃತ ತಯಾರಿಸುವ ಮೂಲಕ ಕೃಷಿ ವಿಜ್ಞಾನಿ ಶ್ರೀನಿವಾಸ್ ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಅವರು ರೈತರು ಸಮಗ್ರ ಹಾಗೂ ಸುಸ್ಥಿರವಾದ ಕೃಷಿ ಪದ್ದತಿಗಳನ್ನು ಅನುಸರಿಸಬೇಕು. ನಮ್ಮ ಪೂರ್ವಜರ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು. ಅಂತರ ಬೇಸಾಯ ಪದ್ದತಿಯಿಂದ ರೈತರ ಆದಾಯ ಹೆಚ್ಚಾಗುತ್ತದೆ. ಕೃಷಿ ಜೊತೆಗೆ ತೋಟಗಾರಿಕೆ,ಹೈನುಗಾರಿಕೆ,ರೇಷ್ಮೆ ಕೃಷಿಗಳನ್ನು ಉಪ ಕಸುಬಾಗಿ ಪರಿಗಣಿಸಿ ವಿಶ್ವಾಸದಿಂದ ದುಡಿದರೆ ಸರ್ಕಾರದ ಯಾವುದೇ ಸಬ್ಸಿಡಿ,ಸಾಲಮನ್ನಾಕ್ಕಾಗಿ ಕಾಯಬೇಕಿಲ್ಲ ಎಂದು ರೈತರಲ್ಲಿ ಅತ್ಮ‌ವಿಶ್ವಾಸ ತುಂಬಿದರು‌. ಅಲ್ಲದೇ ಕೃಷಿಯಲ್ಲಿ ಆದಾಯ ಇಲ್ಲವೆಂದು ಗುಳೆ ಹೋಗುವ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯವೇ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಜೆ.ಎಸ್.ಬಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಶಶಿಕುಮಾರ್ ಮಾತನಾಡಿ ರೈತ ಕುಟುಂಬದ ಸದಸ್ಯರು ತಾವೇ ಜಮೀನುಗಳಲ್ಲಿ ದುಡಿದು ಆಳುಗಳ ಕೊರತೆ ನೀಗಿಸಿಕೊಳ್ಳುವಂತೆ ಸಲಹೆ ನೀಡಿದರು‌. ಅಲ್ಲದೇ ತಾವು ಬೆಳೆದ ಬೆಳೆಗಳನ್ನು ತಾವೇ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸಿಕೊಳ್ಳಬೇಕು. ಗೊಬ್ಬರ ಉತ್ಪಾದನೆಯನ್ನೂ ಸ್ವತಃ ರೈತರೇ ಕಲಿಯಬೇಕು. ದೇಶಿ ತಳಿಯ ಹಸುಗಳನ್ನು ಸಾಕಿ,ಅದರ ಗೊಬ್ಬರ ಕೃಷಿಗೆ ಬಳಸಬೇಕು. ಬೇವಿನ ಮರದ ಎಲೆ,ತೊಗಟೆ,ಹಣ್ಣು,ಬೀಜ,ಬೇರು ಎಲ್ಲದರಲ್ಲೂ ಔಷಧೀಯ ಗುಣಗಳಿವೆ. ಇದರ ಉತ್ಪನ್ನಗಳನ್ನು ಸಿಂಪಡಣೆ ಮಾಡಿದರೆ ಕೀಟಗಳು ನಾಶವಾಗುತ್ತವೆ. ಸಾವಯವ ಹಾಗೂ ಹಸಿರೆಲೆ ಗೊಬ್ಬರವನ್ನು ಹೇರಳವಾಗಿ ಉಪಯೋಗಿಸಿದರೆ ಆದಾಯ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.

        ಕಾರ್ಯಕ್ರಮದಲ್ಲಿ ರೈತರುಗಳಿಗೆ ಕೃಷಿವಿಜ್ಞಾನಿ ರಮೇಶ್ ವಿಶೇಷ ತರಬೇತಿಯನ್ನು ನೀಡಿದರು. ತರಬೇತಿಯಲ್ಲಿ ಸುಭಾಷ್ ಪಾಳೇಕರರ ಝೆಡ್‌.ಬಿ‌.ಎನ್‌.ಎಫ್ ಮಾದರಿ ಕೃಷಿ ಪದ್ದತಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ಹಾಗೂ ಆ ಪದ್ದತಿಯಲ್ಲಿ ಬರುವ ಜೀವಾಮೃತ,ಬೀಜಾಮೃತ ತಯಾರಿಕೆ,ಬೀಜೋಪಚಾರ ಅಲ್ಲದೇ ಸ್ಥಳೀಯ ಬೀಜದ ತಳಿಗಳ ಸಂವರ್ಧನೆ ಕುರಿತು ಉಪನ್ಯಾಸ ನೀಡಿದರು.

           ಕೃಷಿ ಇಲಾಖೆಯ ಲೋಕೇಶ್ ಬೂದಿತಿಟ್ಟು ಝೆಡ್‌.ಬಿ.‌ಎನ್‌.ಎಫ್ ನೈಸರ್ಗಿಕ ಕೃಷಿ ಯೋಜನೆ ಬಗ್ಗೆ ಮಾಹಿತಿ ನೀಡಿದರು.  ಹಿರಿಯ ರೈತ ಮಾಲಂಗಿಯ ಶ್ರೀ ರೇಚಣ್ಣನವರು ತಮ್ಮ ಕೃಷಿ ಅನುಭವವನ್ನು ಹಂಚಿಕೊಂಡು,ಎಲ್ಲರೂ ನೈಸರ್ಗಿಕ ಕೃಷಿಗೆ ಮರಳಬೇಕು ಎಂದರು.

ರೈತ ಮುಖಂಡರಾದ ಕುಂತೂರು ನಂಜುಂಡಸ್ವಾಮಿ,ಅರೇಪಾಳ್ಯ ವಿಷಕಂಠೇಗೌಡ,ನಾಗರಾಜು,ಸುರೇಶ್ ಬೂದಿತಿಟ್ಟು, ಶಾಂತಮೂರ್ತಿ ತೇರಂಬಳ್ಳಿ,ಮೂಡಲಪುರ ಆರಾಧ್ಯ,ಝೆಡ್.ಬಿ.‌ಎನ್‌.ಎಫ್ ಯೋಜನೆಯ ಸಿಬ್ಬಂದಿಗಳಾದ ನಟರಾಜು, ಶಾಂತರಾಜು,ಪ್ರಕಾಶ ಸೇರಿದಂತೆ ಇನ್ನಿತರ ರೈತರು,ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share Post

Leave a Reply

Your email address will not be published. Required fields are marked *

error: Content is protected !!