ಧಾರವಾಡ : ನುಗ್ಗಿಕೇರಿ ಆಂಜನೇಯನಿಗೆ ತುಲಾಭಾರ ಸಲ್ಲಿಸಿದ ಸಂಸದೆ ಸುಮಲತಾ

ಧಾರವಾಡ : ಇತ್ತೀಚಿಗಷ್ಟೇ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿ ರಾಜ್ಯದಲ್ಲಿ ಹೊಸ ದಾಖಲೆ ಸೃಷ್ಟಿಸಿದ ನೂತನ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಧಾರವಾಡಕ್ಕೆ ಭೇಟಿ ನೀಡಿದರು.

ಧಾರವಾಡ ನಗರದಲ್ಲಿ ನಾಡಿನಾದ್ಯಂತ ಪ್ರಸಿದ್ದಿ ಪಡೆದಿರುವ ಶ್ರೀ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಪುತ್ರ ಅಭಿಷೇಕ್ ಗೌಡ ಜೊತೆ ಆಗಮಿಸಿದ ಸಂಸದೆ ಸುಮಲತಾ ಅಂಬರೀಸ್ ಅವರು ಆಂಜನೇಯನ ದರ್ಶನ ಪಡೆದು ಪುನೀತರಾದರು.

ಸಂಸದೆಯಾಗಿ ಮೊದಲಬಾರಿ ಅವಳಿನಗರಕ್ಕೆ ಆಗಮಿಸಿದ ಸುಮಲತಾ ಅಂಬರೀಷ್ ಮತ್ತು ಪುತ್ರ ಅಭಿಷೇಕ್ ಜೊತೆ ನುಗ್ಗಿಕೇರಿ ಹನುಮಂತ ದೇವಸ್ಥಾನದಲ್ಲಿ ತುಲಾಭಾರ ಸೇವೆ ಸಲ್ಲಿಸಿದರು. ಮೊದಲ ಬಾರಿ ಗಂಡು ಮೆಟ್ಟಿದ ನಾಡಿನ ಮಣ್ಣು ತುಳಿದ್ದಿದ್ದೇನೆ ಏನೋ ಒಂದು ಪುಳಕಿತ ಹೆಮ್ಮೆ ಎಂದು ನಟ ಅಭಿಷೇಕ್ ಗೌಡ ಅಭಿಪ್ರಾಯಪಟ್ಟರು.

ನಂತರ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ನಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳೇ ಈ ತುಲಾಭಾರ ಏರ್ಪಡಿಸಿದ್ದಾರೆ. ಈ ತುಲಾಭಾರದ ಬಗ್ಗೆ ನಮಗೆ ಗೊತ್ತೇ ಇಲ್ಲ. ಇಲ್ಲಿಗೆ ಬಂದ ಮೇಲೆ ಗೊತ್ತಾಯಿತು ಎಂದರು. ಸುಮಾರು ಆರೇಳು ವರ್ಷಗಳ ಹಿಂದೆ ಅಂಬರೀಷ್ ಜತೆ ಹುಬ್ಬಳ್ಳಿ-ಧಾರವಾಡಕ್ಕೆ ಬಂದಿದ್ದೆ. ನಂತರ ಈಗ ಇಲ್ಲಿಗೆ ಭೇಟಿ ನೀಡಿರುವುದಕ್ಕೆ ಸಂತೋಷವಾಗಿದೆ. ಚುನಾವಣೆ ವೇಳೆ ಹುಬ್ಬಳ್ಳಿ ಕಡೆಯಿಂದಲೂ ನನಗೆ ಬೆಂಬಲ ನೀಡಲು ಮಂಡ್ಯಕ್ಕೆ ಬಂದಿದ್ದರು. ಅವರೆಲ್ಲರಿಗೂ ಧನ್ಯವಾದಗಳು. ನಮ್ಮ ಮೇಲಿನ ಅಭಿಮಾನದಿಂದ ಈ ತುಲಾಭಾರ ಏರ್ಪಡಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಅಭಿಷೇಕ್ ಜೀವನದಲ್ಲಿ ಇದೇ ಮೊದಲ ಬಾರಿಗೆ ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡಿದ್ದೇನೆ. ನನ್ನ ಹೊಸ ಚಿತ್ರ ಅಮರ್ ಬಗ್ಗೆ ಪ್ರಚಾರ ಮಾಡಲು ನಾವು ಇಲ್ಲಿಗೆ ಬಂದಿದ್ದೇವೆ ಎಂದರು.

ಸುಮಲತಾ ಅವರಿಗೆ 75 ಕೆ.ಜಿ ಸಕ್ಕರೆ ಮತ್ತು 15 ಕೆ.ಜಿ ತುಪ್ಪದಿಂದ ತುಲಾಭಾರವಾದರೆ, ಅಭಿಷೇಕ್ ಅವರಿಗೆ 100 ಕೆ.ಜಿ ಸಕ್ಕರೆ ಹಾಗೂ 15 ಕೆ.ಜಿ ತುಪ್ಪದಲ್ಲಿ ತುಲಾಭಾರ ನೆರವೇರಿತು. ಈ ಸಂದರ್ಭದಲ್ಲಿ ನಟ ದೊಡ್ಡಣ್ಣ,ನಿರ್ಮಾಪಕ ರಾಕ್ ಲೈನ್ ವೆಂಕಟೇಶ್,ನಿರ್ದೇಶಕರಾದ ಯೋಗರಾಜ್ ಭಟ್ ಹಾಗೂ ನಾಗಶೇಖರ ಉಪಸ್ಥಿತರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!