ಸಂಪುಟ ವಿಸ್ತರಣೆಯಾದ ಬಳಿಕ ಈ ಸರ್ಕಾರದ ಆಯಸ್ಸು ಗೊತ್ತಾಗಲಿದೆ..! : ಬಿ.ಎಸ್.ವೈ

ಯಾದಗಿರಿ: ಭಿನ್ನಮತದ ಬೇಗೆಯಲ್ಲಿ ಬೇಯುತ್ತಿರುವ ಮೈತ್ರಿ ಸರ್ಕಾರ ಸಂಪುಟ ವಿಸ್ತರಣೆ ಮಾಡಲು ಮುಂದಾಗಿದ್ದು, ವಿಸ್ತರಣೆಯ ನಂತರ ಉಳಿಯುತ್ತೋ, ಉರುಳುತ್ತೋ ಕಾದು ನೋಡಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸುತ್ತಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜೂ.12ರಂದು ಸಚಿವ ಸಂಪುಟ ವಿಸ್ತರಣೆ ಮಾಡಲು ಮೈತ್ರಿ ಸರ್ಕಾರ ಮುಂದಾಗಿದೆ. ಈಗಾಗಲೇ ಭಿನ್ನಮತದ ಬೆಂಕಿ ಹೊತ್ತಿ ಉರಿಯುತ್ತಿದೆ. ಸಂಪುಟ ವಿಸ್ತರಣೆಯಾದ ಬಳಿಕ ಈ ಸರ್ಕಾರದ ಆಯಸ್ಸು ಗೊತ್ತಾಗಲಿದೆ ಎಂದರು.
ಗ್ರಾಮ ವಾಸ್ತವ್ಯದ ಬದಲು ಮುಖ್ಯಮಂತ್ರಿಗಳು ಶಾಲಾ ವಾಸ್ತವ್ಯ ಆರಂಭಿಸುತ್ತಿದ್ದಾರೆ. ಇದರಿಂದ ಯಾರಿಗೆ ಏನು ಲಾಭವಾಗುತ್ತದೆ ಎಂದು ಪ್ರಶ್ನಿಸಿದರು.
ಯಾದಗಿರಿಯಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಯಡಿಯೂರಪ್ಪ ಅವರು ರೈತರ ಜೊತೆ ಸಂವಾದ ನಡೆಸಿ, ಸಮಸ್ಯೆಗಳನ್ನು ಆಲಿಸಿದರು.
ಜಿಂದಾಲ್ಗೆ ಭೂಮಿ ಮಾರಾಟದಲ್ಲಿ ಸರ್ಕಾರಕ್ಕೆ ಕಿಕ್ಬ್ಯಾಕ್ ಬಂದಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಬೆಲೆಯಲ್ಲಿ ಭೂಮಿಯನ್ನು ಜಿಂದಾಲ್ಗೆ ನೀಡಲಾಗಿದೆ ಎಂದು ಆರೋಪಿಸಿದರು. ಒಂದು ಎಕರೆಗೆ 1.2ಲಕ್ಷ ರೂಗೆ ನಿಗದಿ ಮಾಡಿ ಭೂಮಿ ನೀಡಿದ್ದು ಈ ವ್ಯವಹಾರದಲ್ಲಿ ಸರ್ಕಾರಕ್ಕೆ ಕಿಕ್ ಬ್ಯಾಕ್ ಬಂದಿದೆ ಎಂದು ಅವರು ಹೇಳಿದರು.