ರಾಯಚೂರು : ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ

ರಾಯಚೂರು : ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೀಗ ಮತ್ತೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 10 ವರ್ಷಗಳ ಹಿಂದೆ ಸಿಎಂ ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮವೊಂದರಲ್ಲಿ ಜನರು ಸಾಕಷ್ಟು ಅಭಿವೃದ್ಧಿಯ ನಿರೀಕ್ಷೆಯ ಕನಸನ್ನು ಕಂಡಿದರು. ಆದರೆ ಅವರ ನಿರೀಕ್ಷೆ ಸಂಪೂರ್ಣ ಶೂನ್ಯದತ್ತ ಹುಸಿಯಾಗಿದೆ.

ಸಿಎಂ ಹೆಚ್​ಡಿಕೆ ವಾಸ್ತವ್ಯ ಮಾಡಿದ್ದ ಗ್ರಾಮಕ್ಕೆ ಇನ್ನೂ ಸಿಕ್ಕಿಲ್ಲ ಅಭಿವೃದ್ಧಿ ಭಾಗ್ಯ.!

 2007ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಆಡಳಿತಾವಾಧಿಯಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡು ರಾಜ್ಯದ ನಾನಾ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಇದೀಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಹತ್ತು ವರ್ಷಗಳ ಹಿಂದೆ ಸಿಎಂ ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮವೊಂದರಲ್ಲಿ ಜನರು ಸಾಕಷ್ಟು ಅಭಿವೃದ್ಧಿ ಆಗುತ್ತದೆ ಎನ್ನುವ ನಿರೀಕ್ಷೆ ಇಟ್ಟಿದ್ದರು. ಆದರೆ ಆ ಗ್ರಾಮದ ಬೆಳವಣಿಗೆಯ ಪ್ರಕಾರ ಅಂತಹ ನಿರೀಕ್ಷೆಯ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ ಎನ್ನಲಾಗುತ್ತಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಚಿತ್ರಾಲಿ ಗ್ರಾಮ ಮೊದಲೇ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಯಾವಾಗ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡರೊ ಆಗ ಚಿತ್ರಾಲಿ ಗ್ರಾಮದಲ್ಲೂ ಗ್ರಾಮ ವಾಸ್ತವ್ಯ ಮಾಡಿದ್ದರು. ಆಗ ಗ್ರಾಮಕ್ಕೆ ಜಿಲ್ಲಾಡಳಿತ ತಾತ್ಕಾಲಿಕ ಅಗತ್ಯ ಸೌಲಭ್ಯ ಕಲ್ಪಿಸಿತ್ತು. ಸಿಎಂ ಒಂದು ದಿನ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಗ್ರಾಮದ ಅಭಿವೃದ್ಧಿ ಕೆಲಸ ಮಾಡುವುದಾಗಿ ಭರವಸೆ ನೀಡಿ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ ಸಿಎಂ ಬಂದು ಹೋಗಿ ಇದೀಗ 10 ವರ್ಷಗಳು ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಗ್ರಾಮ ಅಭಿವೃದ್ಧಿ ಕಂಡಿಲ್ಲ ಅಂತಾರೆ ಗ್ರಾಮಸ್ಥರು. 

2007ರ ಜುಲೈ 28ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಸ್ತವ್ಯ ಮಾಡಿದಾಗ ನಮ್ಮೂರ ಭಾಗ್ಯದ ಬಾಗಿಲು ತೆಗೆಯುತ್ತಿದೆ ಎಂದು ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿತ್ತು. ಅದರಂತೆ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿಗಳು ಹೊರತುಪಡಿಸಿದರೆ ಉಳಿದಂತೆ ಯಾವ ಕೆಲಸಗಳೂ ಆಗಿಲ್ಲ ಎನ್ನುವುದು ಗ್ರಾಮಸ್ಥರ ದೂರು. ಇನ್ನು ಗ್ರಾಮಕ್ಕೆ ತೆರಳಬೇಕಾದರೆ ಸಮರ್ಪಕವಾದ ರಸ್ತೆಯಿಲ್ಲ. ಹೀಗಾಗಿ ಹೆಡಗಿನಾಳ ಇಲ್ಲವೇ ಆಯನೂರು ಗ್ರಾಮದಿಂದ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕಾಗಿದೆ. ರಸ್ತೆಗಳ ಸ್ಥಿತಿಯಂತೂ ಸಂಚರಿಸಲೂ ಕಷ್ಟವಾಗಿದೆ. ಗ್ರಾಮದಲ್ಲಿನ 1ರಿಂದ 4ನೇ ತರಗತಿಯವರೆಗಿನ ಶಾಲೆ ಶಿಥಿಲಾವಸ್ಥೆಯಲ್ಲಿದ್ದು, 50 ಮಕ್ಕಳಿಗೆ ಒಬ್ಬರೇ ಖಾಯಂ ಶಿಕ್ಷಕರಿದ್ದಾರೆ. ಶಾಲೆ ಈಗಲೋ ಆಗಲೋ ಬೀಳುವಂತಹ ಸ್ಥಿತಿಯಲ್ಲಿದೆ. ಸಿಎಂ ವಾಸ್ತವ್ಯ ಮಾಡಿದ್ದ ಯಲ್ಲಪ್ಪ ಕವಿತಾಳ ಮನೆ ಸ್ಥಿತಿಯೂ ಬದಲಾಗಿಲ್ಲ. ಬದಲಾಗಿ ಸಿಎಂ ವಾಸ ಮಾಡಿದ್ದ ಯಲ್ಲಪ್ಪರ ಮನೆ ಬಿರುಕು ಬಿಟ್ಟಿದ್ದು, ಗ್ರಾಮದಲ್ಲಿ ಮೂಲಸೌಕರ್ಯ ಎದ್ದು ಕಾಣುತ್ತಿದೆ.

Share Post

Leave a Reply

Your email address will not be published. Required fields are marked *

error: Content is protected !!