ಎನ್​ಡಿಎ-2 ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ರೈತರಿಗೆ ಸಿಹಿ ಸುದ್ದಿ..!

ನವದೆಹಲಿ : ನರೇಂದ್ರ ಮೋದಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಎನ್​ಡಿಎ-2 ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ರೈತರಿಗೆ ಸಿಹಿ ಸುದ್ದಿ ನೀಡಿದೆ. ಪ್ರಣಾಳಿಕೆಯಲ್ಲಿ ಆಶ್ವಾಸನೆ ಕೊಟ್ಟಂತೆ ಪಿಎಂ-ಕಿಸಾನ್ ಯೋಜನೆಯನ್ನು ದೇಶದ ಎಲ್ಲಾ ರೈತರಿಗೂ ಕೊಡಲು ಸಂಪುಟ ಅನುಮೋದನೆ ಮಾಡಿದೆ. ಇದರೊಂದಿಗೆ, ಎಲ್ಲಾ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ವರ್ಷಕ್ಕೆ 6 ಸಾವಿರ ರೂ ಹಣದ ನೆರವು ನೀಡಲಿದೆ.

ಎರಡನೇ ಅವಧಿಗೆ ಪ್ರಧಾನಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಶುಕ್ರವಾರ ಖಾತೆಗಳ ಹಂಚಿಕೆ ಮಾಡಿದ್ದಾರೆ. ಅಮಿತ್ ಶಾ ಅವರಿಗೆ ಗೃಹ ಖಾತೆ, ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಖಾತೆಯಂತಹ ಅಚ್ಚರಿಯನ್ನೂ ನೀಡಿರುವ ಪ್ರಧಾನಿ, ಮೊದಲ ದಿನವೇ ಸಂಪುಟ ಸಭೆ ನಡೆಸಿ ಮಹತ್ವದ ನಿರ್ಧಾರಗಳನ್ನು ಕೈಗೊಂಡರು.

ಪಿಎಂ-ಕಿಸಾನ್ ಯೋಜನೆ ಅಡಿಯಲ್ಲಿ ಇನ್ನು ದೇಶದ ಎಲ್ಲ ರೈತರೂ ವಾರ್ಷಿಕ 6,000 ರೂ.ಗಳ ಕೊಡುಗೆಯನ್ನು ಪಡೆಯಲಿದ್ದಾರೆ. 2019-20ನೇ ಸಾಲಿನ ಸಂಸತ್ತಿನ ಬಜೆಟ್ ಅಧಿವೇಶನ ಜೂನ್ 17ರಿಂದ ಜುಲೈ 26ರ ವರೆಗೆ ನಡೆಯಲಿದ್ದು, ಜೂನ್ 19ರಂದು ಲೋಕಸಭಾ ಸ್ಪೀಕರ್ ಆಯ್ಕೆ ಮಾಡಲಾಗುತ್ತದೆ.

ಸಂಪೂರ್ಣ ಕೇಂದ್ರ ಸರಕಾರದ್ದೇ ಯೋಜನೆಯಾಗಿರುವ ಪಿಎಂ-ಕಿಸಾನ್‌ ಪೆನ್ಷನ್‌ ಯೋಜನೆಯನ್ನು (ಎಸ್‌ಎಂಎಫ್‌) ಸಚಿವ ಸಂಪುಟ ಮೊದಲ ಸಭೆಯಲ್ಲೇ ಅನುಮೋದಿಸಿದೆ. ಈ ಯೋಜನೆ ಸಂಪೂರ್ಣ ಐಚ್ಛಿಕವಾಗಿದ್ದು, ದೇಶದ ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಂಚಣಿ ನೀಡುವ ಯೋಜನೆ ಇದಾಗಿದೆ.

ಈ ವರ್ಗದ 18ರಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದ್ದು, ದೇಣಿಗೆ ಸಲ್ಲಿಸಬಹುದಾಗಿದೆ. ಆ ಮೂಲಕ 60 ವರ್ಷ ವಯಸ್ಸಿನ ಬಳಿಕ ಮಾಸಿಕ ಕನಿಷ್ಠ 3,000 ರೂ.ಗಳ ಪಿಂಚಣಿ ಪಡೆಯಲಿದ್ದಾರೆ.

ಅರ್ಹ ರೈತರು ನೀಡುವಷ್ಟೇ ಪ್ರಮಾಣದ ದೇಣಿಗೆಯನ್ನು ಕೇಂದ್ರ ಸರಕಾರವೂ ಈ ಪಿಂಚಣಿ ನಿಧಿಗೆ ನೀಡಲಿದೆ. ಪಿಂಚಣಿ ಪಡೆಯುತ್ತಿದ್ದ ಚಂದಾದಾರರ ಮರಣದ ಬಳಿಕ ಆ ಫಲಾನುಭವಿಯ ಪತ್ನಿ/ಪತಿಗೆ ಆ ಮೊತ್ತದ ಅರ್ಧದಷ್ಟು (ಎಸ್‌ಎಂಎಫ್‌ ಯೋಜನೆಯ ಚಂದಾದಾರಿಕೆ ಪಡೆದಿರದಿದ್ದರೆ) ಪಿಂಚಣಿ ದೊರೆಯುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್‌ ನಿಧಿಯಡಿ ತನ್ನ ಖಾತೆಗೆ ಬರುವ ಮೊತ್ತವನ್ನೇ (ಪಿಎಂ-ಕಿಸಾನ್) ನೇರವಾಗಿ ತನ್ನ ಪಾಲಿನ ಮಾಸಿಕ ದೇಣಿಗೆಯಾಗಿ ಪಾವತಿಸುವ ಸೌಲಭ್ಯವನ್ನು ರೈತರು ಪಡೆದುಕೊಳ್ಳಲಿದ್ದಾರೆ. ಕನಿಷ್ಠ 5 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೊದಲ ಮೂರು ವರ್ಷಗಳಲ್ಲಿ ಈ ಯೋಜನೆಯ ಫಲ ದೊರೆಯಲಿದೆ.

2019-20ರ ಮಧ್ಯಾವಧಿ ಬಜೆಟ್‌ನಲ್ಲಿ ಪಿಎಂ ಕಿಸಾನ್‌ ಸಮ್ಮಾನ್ ನಿಧಿಗಾಗಿ 75,000 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿತ್ತು. ಆ ಮೊತ್ತದಿಂದಲೇ ಪ್ರತಿ ರೈತರ ಕುಟುಂಬಕ್ಕೆ ತಲಾ 6,000 ರೂ.ಗಳನ್ನು (ಮೂರು ಕಂತಿನಲ್ಲಿ) ನೀಡಲು ನಿರ್ಧರಿಸಲಾಗಿತ್ತು.

ದೇಶ ರಕ್ಷಣೆ ಮಾಡುವವರಿಗೆ ಕೊಡುಗೆ :
ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಮೇ.31 ರಂದು ನಡೆದಿದ್ದು, ದೇಶ ರಕ್ಷಣೆ ಮಾಡುವವರಿಗೆ ಕೊಡುಗೆ ನೀಡಲಾಗಿದೆ.

ರಾಷ್ಟ್ರೀಯ ರಕ್ಷಣಾ ನಿಧಿ ವ್ಯಾಪ್ತಿಯಗೆ ಬರುವ ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಕೆಲವು ಮಹತ್ತರ ಬದಲಾವಣೆಗಳನ್ನು ಜಾರಿಗೆ ತರಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಯೋಧರ ಮಕ್ಕಳಿಗೆ ಈ ಹಿಂದೆ ಮಾಸಿಕ 2000 ರೂಪಾಯಿ ಇದ್ದ ವಿದ್ಯಾರ್ಥಿ ವೇತನವನ್ನು ಈಗ ವಿದ್ಯಾರ್ಥಿಗಳಿಗೆ 2,500 ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದರೆ, ವಿದ್ಯಾರ್ಥಿನಿಯರಿಗೆ 2,250 ರಿಂದ 3000 ಕ್ಕೆ ಏರಿಕೆ ಮಾಡಲಾಗಿದೆ.

ಇನ್ನು ವಿದ್ಯಾರ್ಥಿ ವೇತನದ ವ್ಯಾಪ್ತಿಯನ್ನು ನಕ್ಸಲ್ ಹಾಗೂ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ರಾಜ್ಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗೆ ಲಭ್ಯವಾಗುವಂತೆ ವಿಸ್ತರಿಸಲಾಗಿದೆ. ಇದೇ ವೇಳೆ ರಾಜ್ಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗೆ ಹೊಸದಾಗಿ ವಿದ್ಯಾರ್ಥಿ ವೇತನ ಪಡೆಯುವ ಮಿತಿಯನ್ನು ವಾರ್ಷಿಕ 500 ಕ್ಕೆ ನಿಗದಿಪಡಿಸಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!