ಶಿರಗುಪ್ಪಿ ಮೇವು ಬ್ಯಾಂಕ್ ಗೆ ಸಚಿವ ದೇಶಪಾಂಡೆ ಭೇಟಿ-ಬರ ಪರಿಸ್ಥಿತಿ ವೀಕ್ಷಣೆ

ಹುಬ್ಬಳ್ಳಿ : ಕಂದಾಯ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಇಂದು ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿಗೆ ಭೇಟಿ ನೀಡಿ ಮೇವು ಬ್ಯಾಂಕ್ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು.

ಇದುವರೆಗೆ ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಬರಪೀಡಿತ ಸ್ಥಳಗಳಿಗೆ ಅಧಿಕೃತವಾಗಿ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಈ ಬಾರಿಯೂ ಮುಂಗಾರು ದುರ್ಬಲವಾಗಿ ಬರಪರಿಸ್ಥಿತಿ ಮುಂದುವರೆಯುವ ಆತಂಕವಿದೆ. ಕುಡಿಯುವ ನೀರು ಪೂರೈಸಲು ಟ್ಯಾಂಕರ್ ಗಳನ್ನು ಬಳಸುವ ಅಧಿಕಾರ ಜಿಲ್ಲಾಧಿಕಾರಿಗಳ ಬಳಿ ಮಾತ್ರ ಇತ್ತು. ಅದನ್ನು ವಿಕೇಂದ್ರೀಕರಣ ಮಾಡಿ, ತಹಸೀಲ್ದಾರುಗಳಿಗೆ ನೀಡಲಾಗಿದೆ. ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ಮೋಡ ಬಿತ್ತನೆ ಕಾರ್ಯ ನಡೆಸಲು ಸರ್ಕಾರ ನಿರ್ಧರಿಸಿದೆ. ಮುಖ್ಯವಾಗಿ ಯಾರೊಬ್ಬರೂ ಗುಳೆ ಹೋಗಬಾರದು ಎಂಬ ಉದ್ದೇಶದಿಂದ ನರೇಗಾ ಅಡಿ ಉದ್ಯೋಗ ಸೃಜನೆ ಕಾಮಗಾರಿಗಳನ್ನು ಅಧಿಕ ಪ್ರಮಾಣದಲ್ಲಿ ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷದಲ್ಲಿ 10.47 ಕೋಟಿ ಮಾನವ ದಿನಗಳ ಸೃಜಿಸುವುದರ ಮೂಲಕ ರಾಷ್ಟ್ರದಲ್ಲೇ ಅತಿ ಹೆಚ್ಚು ಉದ್ಯೋಗವನ್ನು ರಾಜ್ಯದಲ್ಲಿ ನೀಡಲಾಗಿದೆ. ಈ ವರ್ಷ 13 ಕೋಟಿ ಮಾನವ ದಿನಗಳ ಗುರಿಯನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ. ಪ್ರತಿ ಜಿಲ್ಲೆಗೂ ಗುರಿ ನಿಗದಿಪಡಿಸಿ ಉದ್ಯೋಗ ಖಾತ್ರಿ ಕೆಲಸಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಟ ಒಂದು ಕಾಮಗಾರಿಯನ್ನಾದರೂ ಕೈಗೊಳ್ಳಲು ಸೂಚಿಸಲಾಗಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರು,ಮೇವು ಪೂರೈಸಲು ಎಲ್ಲಾ 30 ಜಿಲ್ಲೆಗಳಿಗೆ 727 ರಿಂದ 730 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಯಾವುದೇ ಹಣಕಾಸಿನ ಕೊರತೆ ಇಲ್ಲ. ಜುಲೈ ಅಂತ್ಯದವರೆಗೂ ಮೇವು ರಾಜ್ಯದಿಂದ ಹೊರಗೆ ಕಳಿಸಲು ನಿರ್ಬಂಧ ಹೇರಲಾಗಿದೆ. 2005,2007, 2010, 2017 ಹೊರತುಪಡಿಸಿ ಕಳೆದ 14 ವರ್ಷಗಳ ಕಾಲ ಬರ ಅನುಭವಿಸಿದ್ದೇವೆ. ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕು, ಅರಣ್ಯ ಬೆಳೆಸಿ ನಿಸರ್ಗ ಕಾಪಾಡಬೇಕು ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಶಿರಗುಪ್ಪಿ ಮೇವು ಬ್ಯಾಂಕ್ ಗೆ ಸಚಿವ ದೇಶಪಾಂಡೆ ಭೇಟಿ-ಬರ ಪರಿಸ್ಥಿತಿ ವೀಕ್ಷಣೆಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಹೆಚ್.ಕೋನರಡ್ಡಿ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿ.ಪಂ ಸದಸ್ಯೆ ಚೈತ್ರಾ ಶಿರೂರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿ.ಪಂ ಸಿಇಓ ಡಾ.ಬಿ.ಸಿ.ಸತೀಶ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಸಂಗಮೇಶ ಬಾಡಗಿ, ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ.ವಿಶಾಲ್ ಅಡಹಳ್ಳೀಕರ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!