ನಾಳೆ ಯುಗಾದಿ ಸಂಭ್ರಮ –ಬೇವು ಬೆಲ್ಲ ತಿಂದು ಒಳ್ಳೆ ಮಾತಾಡಿ ….

ಯುಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆ ಈ ದಿನ ಹೊಸ ವರ್ಷದ ಮೊದಲ ದಿನ. ಈ ಪರ್ವವನ್ನ ಸಂವತ್ಸರ ಆರಂಭ, ತಮಿಳು ದ್ರಾವಿಡ ಭಾಷೆಗಳಲ್ಲಿ “ಚಿತ್ರವಿಷು”ಎಂಬುದಾಗಿ ಕರೆಯುತ್ತಾರೆ. “ಯುಗ+ಆದಿ” ಯಿಂದ ಯುಗಾದಿ ಪದ ಬಂದಿದೆ. ಇದನ್ನ ಹೊಸ ಯುಗದ ಆರಂಭ ಎಂದು ಕರೆಯಲಾಗುತ್ತೆ.

ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿ ಆಚರಿಸುತ್ತಾರೆ. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಾಡ್ವ.

ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನು ಮತ್ತು ಕಷ್ಟದ ಸಂಕೇತವಾದ ಬೇವನ್ನ ಸಮನಾಗಿ ಸ್ವೀಕರಿಸಲಾಗುತ್ತೆ. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. 

ಬೇವು ಬೆಲ್ಲ ಸ್ವೀಕರಿಸುವಾಗ ಹೇಳುವ ಶ್ಲೋಕ ಹೀಗಿದೆ.

ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ||

ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇವೆ.

ಯುಗಾದಿ ಹಬ್ಬದಂದು ಬೇವು-ಬೆಲ್ಲ ತಿನ್ನುವ ಆಚರಣೆಯು ಒಂದು ವಿಶಿಷ್ಟ ಪರಿಕಲ್ಪನೆಯೇ ಸರಿ. ಸಿಹಿ-ಕಹಿ, ಸುಖ-ಕಷ್ಟ, ನಲಿವು-ನೋವು ಎಂಬ ಮಾತಿನಂತೆ, ಜೀವನದಲ್ಲಿ ಇವೆರಡರ ಸಮಾನ ಇರುವಿಕೆ ಅಗತ್ಯವಾಗಿದೆ. ಆಗ ಮಾತ್ರ ಜೀವನ ಸುಗಮವಾಗಿ ಸಾಗಲು ಸಾಧ್ಯ. ಜೀವನ ಎನ್ನುವುದು ಕಷ್ಟ-ಸುಖಗಳ ಸಂಯೋಜನೆಯಾಗಿದೆ. ಹಾಗಾಗಿ, ಇವೆರಡು ಒಂದನ್ನೊಂದು ಬಿಟ್ಟಿರಲಾರವು. ಕಷ್ಟವಿಲ್ಲದೆ, ಸುಖವಿಲ್ಲ; ಸುಖವಿಲ್ಲದೆ ಕಷ್ಟವಿಲ್ಲ ಎಂಬುದು ಸತ್ಯವಾಗಿದೆ. ಈ ಆಶಯದಂತೆ ನಾವು ಯುಗಾದಿ ಹಬ್ಬದಲ್ಲಿ ಬೇವು- ಬೆಲ್ಲವನ್ನು ಹಂಚಿ ತಿನ್ನುತ್ತೇವೆ.

ಇನ್ನು ಹಬ್ಬದ ದಿನ ಹೆಂಗಳೆಯರು ಯುಗಾದಿ ದನ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುತ್ತಾರೆ. ಮುಂಜಾನೆ ಬೇಗನೆದ್ದು ಅಭ್ಯಂಜನ ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವುದು ಈ ದಿನದ ಸಂಪ್ರದಾಯ. ಮನೆಯ ಹಿರಿಯರು ಪಂಚಾಂಗವನ್ನು ಓದುತ್ತಾರೆ, ಮತ್ತೆಲ್ಲರೂ ಅದನ್ನು ಕೇಳುತ್ತಾರೆ.

ಗ್ರಾಮೀಣ ಭಾಷೆಯಲ್ಲಿ ಹೇಳುವುದಾದರೆ, ಯುಗಾದಿಯು “ಉಗಾದಿ” ಎನಿಸಿಕೊಳ್ಳುತ್ತದೆ. ಉಗಾದಿ ಹಬ್ಬವು ಶಿಶಿರ ಋತು ಕಳೆದು ವಸಂತನಾಗಮನದ ಮೊದಲ ಹಬ್ಬ. ಇದು ಭಾರತೀಯರಾದ ನಮ್ಮ ಪಾಲಿಗೆ ‘ಹೊಸವರುಷ’ದ ಮೊದಲ ದಿನ.

Share Post

Leave a Reply

Your email address will not be published. Required fields are marked *

error: Content is protected !!