ಅವ್ರು ಬ್ರೇಕ್ ಫಾಸ್ಟ್ ಗೆ ಅಂತ ಎಷ್ಟು ಕಿಲೋಮೀಟರ್ ಹೋಗ್ತಾರೆ ಗೊತ್ತಾ ?

ಸಿಲಿಕಾನ್ ಸಿಟಿ ಬೆಂಗಳೂರಿನ  ಮಂದಿಗೆ ವಾರ ಪೂರ್ತಿ ಟೆನ್ಷನ್ನೋ ಟೆನ್ಷನ್ ! ಕೆಲ್ಸ ಇದ್ದವ್ರಿಗೆ  ಕೆಲ್ಸದ್ ಟೆನ್ಷನ್, ಇಲ್ಲದವ್ರಿಗೆ ಇಲ್ಲ ಅನ್ನೋ ಟೆನ್ಷನ್, ಇಬ್ಬರಿಗೂ ಬಿಡದೆ  ಕಾಡೋ ಟ್ರಾಫಿಕ್  ಟೆನ್ಷನ್. ಒಟ್ನಲ್ಲಿ  ಲೈಫು ಬೋರೋ ಬೋರು !

ಹೀಗೆ ರೂಟಿನ್ ವರ್ಕ್ ಅನ್ನೋ ವರ್ತುಲಕ್ಕೆ ಸಿಕ್ಕ ಮಂದಿ ವೀಕೆಂಡ್ ಬಂದ್ರೆ ಸಾಕು ಅಂತ ಬುಧವಾರದಿಂದ್ಲೇ ಕಾಯೋಕ್ಕೆ ಶುರು ಮಾಡ್ತಾರೆ.  ಹೀಗೆ, ವೀಕೆಂಡ್  ಗೆ ರಿಲ್ಯಾಕ್ಸ್ ಹುಡುಕೋ ಮಂದಿಗೆ ಅಂತಾನೇ ಹುಟ್ಟಿಕೊಂಡಿದ್ದು ಬೈಕರ್ಸ್ ಕ್ಲಬ್. ಇದ್ರ ಹೆಸ್ರು ಫ್ರೀ ಸ್ಪಿರಿಟ್ ಮೋಟಾರ್ ಸೈಕ್ಲಿಂಗ್ ಅಂತ. ಇವ್ರು ತಿಂಗಳಿಗೊಮ್ಮೆ ಸಂಡೇ ಬಂದ್ರೆ ಸಾಕು, ಬ್ರೇಕ್ ಫಾಸ್ಟ್ ಮಾಡೋಕ್ಕೆ ಅಂತ ಬೆಂಗಳೂರಿನಾಚೆ ರೈಡ್ ಹೊರಡ್ತಾರೆ. ತಮ್ಮ ತಮ್ಮ ಬೈಕ್ ಗಳಲ್ಲಿ ಫ್ಯಾಮಿಲಿ ಹತ್ತಿಸಿಕೊಳ್ಳೋ 40-50 ಮಂದಿ ಬೆಂಗಳೂರು ಸುತ್ತ ಮುತ್ತ ಇರೋ ಸ್ಪಾಟ್ ಗಳಿಗೆ ರೈಡ್  ಹೋಗ್ತಾರೆ. ಎಲ್ಲರೂ ಸೇರಿಕೊಂಡು ಬ್ರೇಕ್ ಫಾಸ್ಟ್ ಮುಗಿಸಿ ಮಧ್ಯಾಹ್ನದಷ್ಟೊತ್ತಿಗೆಲ್ಲಾ ವಾಪಸ್ ಬೆಂಗಳೂರಿಗೆ ಬಂದುಬಿಡ್ತಾರೆ.

ಇಷ್ಟೇ ಅಲ್ಲಾ, ವರ್ಷಕ್ಕೊಮ್ಮೆಯೋ, ಎರಡು ಬಾರಿಯೋ ಗೋವಾ,ಮುಂಬೈ, ಕರಾವಳಿ, ಕೇರಳ ಹೀಗೆ ಕೋಸ್ಟಲ್ ರೈಡ್ ಮುಂತಾದ ಈವೆಂಟ್ ಆಯೋಜಿಸ್ತಾರೆ. ಪವನ್, ಅಭಿಷೇಕ್ ಆನಂದ್, ಗೌತಮ್ , ವಿಜಿ ಮೊದಲಾದ ಗೆಳೆಯರು ಸೇರಿಕೊಂಡು ಆರಂಭಿಸಿದ ಈ ಬೈಕರ್ಸ್ ಕ್ಲಬ್ ನಲ್ಲಿ 100 ಕ್ಕೂ ಹೆಚ್ಚು ಕುಟುಂಬಗಳು ಈಗ ಸದಸ್ಯರಾಗಿವೆ. ಬ್ಯಾಚುಲರ್ಸ್ ಇಂತಹ ಟ್ರಿಪ್ ಹೋಗೋದು ಹೊಸತೇನಲ್ಲ. ಆದರೆ, ಈ ಟೀಂನಲ್ಲಿ ಫ್ಯಾಮಿಲಿಗಳೇ ಇವೆ. ಕನಿಷ್ಟ 250 ಸಿಸಿ ಬೈಕ್ ಹೊಂದಿರುವ, ಜಾಲಿ ರೈಡ್ ನಲ್ಲಿ ಆಸಕ್ತಿಹೊಂದಿರುವ ಯಾರು ಬೇಕಾದರೂ ಇದಕ್ಕೆ ಮೆಂಬರ್ಸ್ ಆಗಬಹುದು.

ಅಂದಹಾಗೆ, ಇವ್ರ ಕೆಲ್ಸ ಇಷ್ಟೇನಾ  ಅಂದ್ಕೋಬೇಡಿ. ಇದು ಹವ್ಯಾಸಕ್ಕೆ ಅಂತ ಹುಟ್ಟಿಕೊಂಡ ಕ್ಲಬ್ ಆದರೂ,ಕ್ರಮೇಣ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದೆ. ಶಾಲಾಮಕ್ಕಳಿಗೆ ಪುಸ್ತಕ ಬ್ಯಾಗ್ ವಿತರಿಸುವುದು, ಕಷ್ಟದಲ್ಲಿರುವವರ ನೆರವಿಗೆ ಧಾವಿಸುವುದು, ಪ್ರಾಣಿಗಳ ರಕ್ಷಣೆ ಹೀಗೆ ನಾನಾ ಸಮಾಜಮುಖಿ ಕೆಲಸಗಳಲ್ಲೂ ಈ ಕ್ಲಬ್ ತೊಡಗಿಕೊಂಡಿದೆ.

Share Post

Leave a Reply

Your email address will not be published. Required fields are marked *

error: Content is protected !!