ಪಿ.ಚಿದಂಬರಂಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

ನವದೆಹಲಿ- ಬಹುಕೋಟಿ ರೂ.ಗಳ ಐಎನ್‍ಎಕ್ಸ್ ಮೀಡಿಯಾ ಲಂಚ ಹಗರಣದಲ್ಲಿ ಆರೋಪಿಯಾಗಿ ತಿಹಾರ್ ಜೈಲಿನಲ್ಲಿರುವ ಕೇಂದ್ರ ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಪಿ.ಚಿದಂಬರಂಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದೆ.

ಇದರಿಂದಾಗಿ ಚಿದಂಬರಂ ಜೈಲುವಾಸ ಮುಂದುವರೆದಂತಾಗಿದೆ. ತಮಗೆ ಜಾಮೀನು ನೀಡುವಂತೆ ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್‍ಕೈಟ್ ಮನವಿಯನ್ನು ತಿರಸ್ಕರಿಸಿದರು.

ಚಿದಂಬರಂ ಅವರಿಗೆ ಜಾಮೀನು ನೀಡಿದರೆ ಅವರು ಸಾಕ್ಷ್ಯಾಧಾರಗಳನು ತಿರುಚುವ ಸಾಧ್ಯತೆ ಇದೆ. ಅಲ್ಲದೆ ಪ್ರಭಾವಿಯಾಗಿರುವ ಅವರು ಸಾಕ್ಷ್ಯಾಧಾರಗಳ ಮೇಲೆ ತಮ್ಮ ಪ್ರಭಾವ ಬೀರುವ ಸಂಭವವೂ ಇದೆ ಎಂದು ಕಾರಣ ನೀಡಿ ನ್ಯಾಯಾಧೀಶರು ಚಿದಂಬರವರ ಅರ್ಜಿಯನ್ನು ತಿರಸ್ಕರಿಸಿದರು. ಐಎನ್‍ಎಕ್ಸ್ ಮೀಡಿಯ ಲಂಚ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆ.21ರಂದು ಸಿಬಿಐನಿಂದ ಬಂಧಿತರಾದ ಚಿದಂಬರಂ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ.

ತಮಗೆ ಜಾಮೀನು ನೀಡಲು ನಿರಾಕರಿಸಿದ ದೆಹಲಿ ವಿಚಾರಣಾಧೀನ ನ್ಯಾಯಾಲಯದ ಆದೇಶದ ವಿರುದ್ಧ ಅವರು ಹೈಕೋರ್ಟ್‍ಗೆ ತಮ್ಮ ವಕೀಲರ ಮೂಲಕ ಮನವಿ ಸಲ್ಲಿಸಿ ಜಾಮೀನು ನೀಡುವಂತೆ ಕೋರಿದ್ದರು. ಹೈಕೋರ್ಟ್‍ನಲ್ಲೂ ಚಿದಂಬರಂಗೆ ಹಿನ್ನಡೆಯಾಗಿದ್ದು, ಮುಂದಿನ ವಿಚಾರಣೆವರೆಗೆ ಅವರು ದೆಹಲಿ ತಿಹಾರ್ ಜೈಲಿನಲ್ಲೇ ಇರುವಂತಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!