ರಾಜ್ಯದಲ್ಲಿ ಜುಲೈ 31ರ ತನಕ ಈ 3 ದೇವಾಲಯಗಳು ಬಂದ್

ಬೆಳಗಾವಿ, ಜೂನ್ 30 : ಸವದತ್ತಿ ರೇಣುಕಾ ಯಲ್ಲಮ್ಮದೇವಿ ಸೇರಿದಂತೆ ಮೂರು ದೇವಾಲಯಗಳಿಗೆ ಜುಲೈ 31ರ ತನಕ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಈ ಆದೇಶ ನೀಡಿದೆ.

ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕೊರೊನಾ ಸೋಂಕು ಹರಡುವ ಆತಂಕ ಮತ್ತು ಭಕ್ತರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸವದತ್ತಿ ರೇಣುಕಾ ಯಲ್ಲಮ್ಮ ದೇವಿ, ಜೋಗುಳಬಾವಿ ಸತ್ತೆಮ್ಮದೇವಿ, ರಾಯಭಾಗದ ಚಿಂಚಲಿ ಮಾಯಕ್ಕ ದೇವಿ ದೇವಾಯಗಳಿಗೆ ಜುಲೈ 31ರ ತನಕ ಭಕ್ತರು ಭೇಟಿ ನೀಡುವಂತಿಲ್ಲ. ಈಗಾಗಲೇ ಭಕ್ತರ ಪ್ರವೇಶಕ್ಕೆ ನಿರ್ಬಂಧವಿದ್ದು, ಅದನ್ನು ಇನ್ನೂ ಒಂದು ತಿಂಗಳು ವಿಸ್ತರಣೆ ಮಾಡಲಾಗಿದೆ.

ಈ ದೇವಾಲಯಗಳ ಆಡಳಿತ ಮಂಡಳಿಯವರು ನಿತ್ಯದ ಧಾರ್ಮಿಕ ವಿಧಿ ವಿಧಾನಗಳನ್ನು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನಡೆಸಲು ವಿನಾಯಿತಿ ನೀಡಲಾಗಿದೆ. ಆದರೆ ಯಾವುದೇ ಭಕ್ತರು ದೇವಾಲಯಕ್ಕೆ ಭೇಟಿ ನೀಡುವಂತಿಲ್ಲ.

ಬೆಳಗಾವಿ ಜಿಲ್ಲೆಯ ದೇವಾಲಯಗಳಿಗೆ ಮಹಾರಾಷ್ಟ್ರದಿಂದಲೂ ಹಲವಾರು ಭಕ್ತರು ಆಗಮಿಸುತ್ತಾರೆ. ಪಕ್ಕದ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಿರುವುದರಿಂದ ಭಕ್ತರ ಭೇಟಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 326. ಸೋಮವಾರ ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

Share Post

Leave a Reply

Your email address will not be published. Required fields are marked *

error: Content is protected !!