ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದ ಕುರಿತು ಸುದ್ದಿಗೋಷ್ಟಿ: ಆರ್.ಅಶೋಕ್

ಬೆಂಗಳೂರಿನಲ್ಲಿ ಕೊರೊನಾ ಸೋಂಕು ನಿಯಂತ್ರಣದ ಕುರಿತು ಸುದ್ದಿಗೋಷ್ಟಿ ನಡೆಸಿದ ಸಚಿವ ಆರ್.ಅಶೋಕ್, ತಾವು ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಎಲ್ಲ ಆಸ್ಪತ್ರೆಗಳಿಗೆ ಒಬ್ಬೊಬ್ಬ ಸಾರ್ವಜನಿಕ ಸಂಪರ್ಕ ಅಧಿಕಾರಿ ನೇಮಿಸುವಂತೆ ಸೂಚಿಸಲಾಗಿದೆ ಎಂದರು. ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಇನ್ನು ಆರು ತಿಂಗಳ ಕಾಲ ಇದೇ ರೀತಿ ಕಾರ್ಯನಿರ್ವಹಿಸಲು ಮಾನಸಿಕವಾಗಿ ಸಿದ್ದರಾಗುವಂತೆ ಸೂಚಿಸಲಾಗಿದೆ ಎಂದರು.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ತಾವು ಚಿಕಿತ್ಸೆ ನೀಡುವ ರೋಗಿಗಳೊಂದಿಗೆ ವಿಡಿಯೋ ಮಾಡಿ ಅದನ್ನು ಆಸ್ಪತ್ರೆಯ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ತೋರಿಸಬೇಕೆಂದು ಸೂಚಿಸಲಾಗಿದೆ ಎಂದರು. ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಪಿಪಿಇ ಕಿಟ್ ಅಳವಡಿಸಿ ಕೆಲಸ ಮಾಡುತ್ತಿದ್ದರೂ ಭೀತಿಗೆ ಒಳಗಾಗಿದ್ದಾರೆ. ಅವರು ಇನ್ನಷ್ಟು ಆಸಕ್ತಿಯಿಂದ ಕೆಲಸ ಮಾಡಲು ಅವರಿಗೆ ವೇತನ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈ ಕುರಿತು ಸಿಎಂ ಜೊತೆಗೂ ಮಾತುಕತೆ ನಡೆದಿದೆ ಎಂದರು.

ಕೋವಿಡ್ ಕೇರ್ ಆಸ್ಪತ್ರೆಗಳಿಗೆ ಹೊಸದಾಗಿ ನೇಮಕವಾಗುತ್ತಿರುವ ತಹಶೀಲ್ದಾರ್ ರನ್ನು ನೇಮಿಸುವುದಾಗಿ ಅಶೋಕ್ ಇದೇ ವೇಳೆ ತಿಳಿಸಿದರು. ಕೇಂದ್ರ ಸರ್ಕಾರದಿಂದ ರಾಜ್ಯ ಕಂದಾಯ ಇಲಾಖೆಗೆ 742 ಕೋಟಿ ಅನುದಾನ ಕೊಟ್ಟಿದೆ. ಈ ಪೈಕಿ 237 ಕೋಟಿ ಜಿಲ್ಲಾಧಿಕಾರಿಗಳಿಗೆ, ಆರೋಗ್ಯ ಇಲಾಖೆಗೆ 70 ಕೋಟಿ, ಬಿಬಿಎಂಗೆ 50 ಕೋಟಿ, ರೈಲ್ವೆೇಸ್ ಗೆ 12 ಕೋಟಿ, ಬಿಎಂಟಿಸಿಗೆ 2.39 ಕೋಟಿ ನೀಡಲಾಗಿದೆ ಎಂದರು.

ಆಸ್ಪತ್ರೆಗಳಲ್ಲೂ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಇದನ್ನು ನೋಡಿಕೊಳ್ಳಲು ಡಯಟೇಶಿಯನ್ ನೇಮಿಸಲಾಗಿದೆ ಎಂದರು. ಅಲ್ಲದೇ, ಮಧುಮೇಹ, ಕಿಡ್ನಿ ರೋಗಿಗಳಿಗೆ, ಮಕ್ಕಳಿಗೆ ಪ್ರತ್ಯೇಕ ಆಹಾರ ಒದಗಿಸಲಾಗುತ್ತಿದೆ ಎಂದು ಸಚಿವ ಅಶೋಕ್ ಮಾಹಿತಿ ನೀಡಿದರು.

 

ದಿ ನ್ಯೂಸ್ 24 ಕನ್ನಡ, ಬೆಂಗಳೂರು

Share Post

Leave a Reply

error: Content is protected !!