ಬಿಎಸ್ ವೈ ಗೂ ಶಾಕ್ ಕೊಟ್ಟ ಹೈಕಮಾಂಡ್: ಒಂದು ಸ್ಥಾನ ಗೆಲ್ಲಲು ಎಷ್ಟು ಮತ ಬೇಕು

ಮಣಿಪಾಲ:ಜೂನ್ 19ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯದ ಕಾಂಗ್ರೆಸ್ ನಿಂದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ನಿಂದ ನಾಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನಾಮಪತ್ರ ಸಲ್ಲಿಸಲಿದ್ದು ಏತನ್ಮಧ್ಯೆ ರಾಜ್ಯ ಬಿಜೆಪಿ ಕೋರ್ ಕಮಿಟಿಗೆ ಮಾತ್ರ ಹೈಕಮಾಂಡ್ ದೊಡ್ಡ ಶಾಕ್ ನೀಡಿದೆ.

ಕೋರ್ ಕಮಿಟಿ ಶಿಫಾರಸು ತಿರಸ್ಕರಿಸಿದ ಹೈಕಮಾಂಡ್, ಬಿಎಸ್ ವೈಗೂ ಶಾಕ್!
ಸಾಕಷ್ಟು ಚರ್ಚೆ, ಮಾತುಕತೆ ನಂತರ ರಾಜ್ಯ ಬಿಜೆಪಿ ಕೋರ್ ಕಮಿಟಿ ಐದು ಮಂದಿ ಹೆಸರನ್ನು ರಾಜ್ಯಸಭೆಗೆ ಪರಿಗಣಿಸಿ ಟಿಕೆಟ್ ನೀಡುವಂತೆ ಶಿಫಾರಸು ಮಾಡಿ ಕಳುಹಿಸಿತ್ತು. ಅಷ್ಟೇ ಅಲ್ಲ ರಾಜ್ಯಸಭೆ ಟಿಕೆಟ್ ಗಾಗಿ ಬಿಜೆಪಿ ದೊಡ್ಡ ಮಟ್ಟದ ಲಾಬಿ ಹಾಗೂ ಒತ್ತಡ ತಂತ್ರ ಹೇರುವ ಘಟನೆ ಕೂಡಾ ನಡೆದಿತ್ತು.

ಉತ್ತರಕರ್ನಾಟಕಕ್ಕೆ ಆದ್ಯತೆ ನೀಡಬೇಕೆಂದು ಉಮೇಶ್ ಕತ್ತಿ ಹಾಗೂ ಯತ್ನಾಳ್ ದಿಢೀರ್ ಸಭೆ ನಡೆಸಿ ಚರ್ಚಿಸಿದ್ದರು. ಇದು ರಾಜ್ಯ ರಾಜಕೀಯದಲ್ಲಿ ವಿವಾದ ಸೃಷ್ಟಿಸುತ್ತಿದ್ದಂತೆಯೇ ಅದಕ್ಕೆ ಸಮಜಾಯಿಷಿ ನೀಡುವ ಮೂಲಕ ತೇಪೆ ಹಚ್ಚಲಾಗಿತ್ತು.

ಇದೀಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ ಅಚ್ಚರಿ ಪಡುವಂತೆ ಬಿಜೆಪಿ ಹೈಕಮಾಂಡ್ ಕೋರ್ ಕಮಿಟಿ ಶಿಫಾರಸನ್ನು ತಿರಸ್ಕರಿಸಿ ಇಬ್ಬರು ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆ ಟಿಕೆಟ್ ನೀಡುವ ಮೂಲಕ ದೊಡ್ಡ ಶಾಕ್ ನೀಡಿದೆ.

ರಾಜ್ಯಸಭೆ ಟಿಕೆಟ್ ಗಾಗಿ ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ರಮೇಶ್ ಕತ್ತಿ, ಪ್ರಕಾಶ್ ಶೆಟ್ಟಿ ಅವರ ಹೆಸರು ಚಾಲ್ತಿಯಲ್ಲಿತ್ತು. ಅಷ್ಟೇ ಅಲ್ಲ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿಯೂ ಈ ಹೆಸರನ್ನು ಶಿಫಾರಸು ಮಾಡಿತ್ತು. ಕತ್ತಿ ಹಾಗೂ ಪ್ರಕಾಶ್ ಶೆಟ್ಟಿ ಅವರ ಆಯ್ಕೆ ಬಗ್ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲ ಸೂಚಿಸಿದ್ದಾರೆನ್ನಲಾಗಿದೆ.

ಬಿಜೆಪಿ ಹೈಕಮಾಂಡ್ ಇದ್ಯಾವುದನ್ನೂ ಪರಿಗಣಿಸದೇ ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಿದೆ. ಇದರೊಂದಿಗೆ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗಕ್ಕೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದಂತಾಗಿದೆ. ಅಲ್ಲದೇ ಬಿಜೆಪಿ ಹೈಕಮಾಂಡ್ ಯಾವುದಕ್ಕೂ ಬಗ್ಗಲ್ಲ ಎಂಬ ಪರೋಕ್ಷ ಸಂದೇಶವನ್ನು ರವಾನಿಸಿದೆ. ಅಷ್ಟೇ ಅಲ್ಲ ಕುದುರೆ ವ್ಯಾಪಾರಕ್ಕೂ ಕಡಿವಾಣ ಹಾಕಿದೆ.

ಭಾರತೀಯ ಜನತಾ ಪಕ್ಷ 117 ಸ್ಥಾನ ಹೊಂದಿದ್ದು, ರಾಜ್ಯಸಭೆಗೆ ಇಬ್ಬರನ್ನು ಯಾವುದೇ ಸಮಸ್ಯೆ ಇಲ್ಲದೆ ಆಯ್ಕೆ ಮಾಡಬಹುದಾಗಿದೆ.

ದೇವೇಗೌಡರ ಗೆಲುವು ಸಾಧ್ಯವೇ?
ರಾಜ್ಯ ವಿಧಾನಸಭೆಯಲ್ಲಿ ಜೆಡಿಎಸ್ 34 ಸ್ಥಾನಗಳನ್ನು ಹೊಂದಿದೆ. ಎಚ್.ಡಿ.ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಇರಾದೆ ಹೊಂದಿದೆ. ಈ ನಿಟ್ಟಿನಲ್ಲಿ ದೇವೇಗೌಡರು ಮಂಗಳವಾರ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಜೆಡಿಎಸ್ ಗೆ ಸ್ವಂತ ಬಲದ ಮೇಲೆ ರಾಜ್ಯಸಭೆ ಸ್ಥಾನ ಗೆಲ್ಲಲು ಸಾಧ್ಯವಿಲ್ಲ. ಇದಕ್ಕೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಬೆಂಬಲದ ಅಗತ್ಯವಿದೆ. ಯಾಕೆಂದರೆ ಒಬ್ಬ ಅಭ್ಯರ್ಥಿ ಗೆಲ್ಲಲು 44 ಸ್ಥಾನಗಳ ಅಗತ್ಯವಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ತಮ್ಮ ಅಭ್ಯರ್ಥಿಗೆ ಮತದಾನ ಮಾಡಿ ಉಳಿದ ಹೆಚ್ಚುವರಿ ಮತಗಳನ್ನು ದೇವೇಗೌಡರಿಗೆ ಹಾಕಿದ್ದಲ್ಲಿ ಗೆಲುವು ಸಾಧ್ಯ.

 

Share Post

Leave a Reply

Your email address will not be published. Required fields are marked *

error: Content is protected !!