ಕೊರೊನಾಗೆ ಪಾಕ್‌ ಶಾಸಕನ ಸಾವು; ಲಾಹೋರ್‌ನಲ್ಲಿ ಲೆಕ್ಕಕ್ಕೆ ಸಿಗದ ಪ್ರಕರಣಗಳು?

ಇಸ್ಲಾಮಾಬಾದ್‌: ಕೋವಿಡ್‌-19 ವೈರಸ್‌ಗೆ ಪಾಕ್‌ ಸಿಂಧ್‌ ಪ್ರಾಂತ್ಯದ ಸಚಿವರು ಬಲಿಯಾದ ಬೆನ್ನಲ್ಲೇ ಖೈಬರ್‌ ಪಕ್ತುಂಕ್ವಾ ಪ್ರಾಂತ್ಯದ ತೆಹರೀಕ್‌ ಇ ಇನ್ಸಾಫ್ ಪಕ್ಷದ ಶಾಸಕರೊಬ್ಬರಲು ಬಲಿಯಾಗಿದ್ದಾರೆ.

ಮಿಯಾನ್‌ ಜೆಮ್ಶೆಡ್‌ ಕಾಕಾಖೀಲ್‌ (65) ಕಳೆದ 10 ದಿನಗಳಿಂದ ಇಸ್ಲಾಮಾಬಾದ್ ನ ಆಸ್ಪತ್ರೆಯಲ್ಲಿದ್ದು ಬುಧವಾರ ಕೊನೆಯುಸಿರೆಳೆದರು. ಇತ್ತೀಚೆಗೆ ಅವರ ಪುತ್ರ ಮಿಯಾನ್‌ ಓಮರ್‌ ಅವರು ಕೋವಿಡ್‌ನಿಂದ ಗುಣಮುಖರಾಗಿದ್ದರು.

ಪಾಕಿಸ್ಥಾನದಲ್ಲಿ ಸಂಸದರು, ಶಾಸಕರಿಗೆ ಕೋವಿಡ್‌ ತಗುಲಿದ ಪ್ರಕರಣಗಳು ಹೆಚ್ಚುತ್ತಿದ್ದು, ಕೆಲವರು ಮೃತಪಟ್ಟಿದ್ದಾರೆ. ಇನ್ನು ಬುಧವಾರದ ವೇಳೆಗೆ ಪಾಕ್‌ನಲ್ಲಿ 4312 ಹೊಸ ಪಾಸಿಟಿವ್‌ ಕೇಸುಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 80,463ಕ್ಕೆ ಏರಿಕೆಯಾಗಿದೆ.

ಲಾಹೋರ್ನಲ್ಲಿ 6.70 ಲಕ್ಷ ಕೇಸು?
ಪಾಕ್‌ನಾದ್ಯಂತ ಪ್ರಕರಣಗಳ ಸಂಖ್ಯೆ ಏರುತ್ತಿರುವಂತೆ ಪಾಕ್‌ನ ಪ್ರಮುಖ ನಗರಗಳಲ್ಲೊಂದಾದ ಲಾಹೋರ್‌ ಒಂದರಲ್ಲೇ ಪ್ರಕರಣಗಳ ಸಂಖ್ಯೆ 6.70 ಲಕ್ಷ ದಾಟಿರಬಹುದು ಎಂದು ಪಂಜಾಬ್‌ ಪ್ರಾಂತ್ಯದ ಆರೋಗ್ಯ ಸಚಿವಾಲಯ ಅಲ್ಲಿನ ಮುಖ್ಯಮಂತ್ರಿಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.

ಇದರಿಂದ ಕೂಡಲೇ ನಾಲ್ಕುವಾರ ಸಂಪೂರ್ಣ ಲಾಕ್‌ಡೌನ್‌ ಘೋಷಿಸಬೇಕು ಎಂದು ಒತ್ತಾಯಿಸಲಾಗಿದೆ. ಸದ್ಯ ಲಾಹೋರ್‌ನಲ್ಲಿ ಸಾಮುದಾಯಿಕವಾಗಿ ವೈರಸ್‌ ಪಸರಿಸುತ್ತಿದ್ದು, ವ್ಯಾಪಕವಾಗಿದೆ. ಇದು ಇನ್ನಷ್ಟು ವ್ಯಾಪಕವಾಗುವ ಮುನ್ನ ಕಡಿವಾಣ ಹಾಕಬೇಕಿದೆ ಎಂದು ಹೇಳಲಾಗಿದೆ. ಪಂಜಾಬ್‌ ಪ್ರಾಂತ್ಯವೊಂದರಲ್ಲಿ 26240 ಕೇಸುಗಳು ಪತ್ತೆಯಾಗಿದ್ದು ಇದರಲ್ಲಿ 497 ಮಂದಿ ಮೃತಪಟ್ಟಿದ್ದಾರೆ.

Share Post

Leave a Reply

error: Content is protected !!