ಆಸ್ತಿ ನೋಂದಣಿಯಲ್ಲಿ ಗೋಲ್‌ಮಾಲ್ : ಮೂವರು ಹಿರಿಯ ಸಬ್ ರಿಜಿಸ್ಟ್ರಾರ್‌ಗಳು ಅಮಾನತು

ಬೆಂಗಳೂರು

ಮೇ.28 – ಗ್ರಾಮೀಣ ಪ್ರದೇಶದ ಆಸ್ತಿಯನ್ನು ಬಿವಿಎಂಪಿ ಆಸ್ತಿ ಎಂದು ತೋರಿಸಿ ಮಾಲೀಕರಿಗೆ ನೋಂದಣಿ ಮಾಡಿಕೊಡುವ ಮೂಲಕ ಭ್ರಷ್ಟಾಚಾರ ಎಸಗಿರುವ ಹಿನ್ನಲೆಯಲ್ಲಿ ಮೂವರು ಹಿರಿಯ ಸಬ್ ರಿಜಿಸ್ಟ್ರಾರ್‌ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಮಾದನಾಯಕನಹಳ್ಳಿ ಹಿರಿಯ ಉಪ ನೋಂದಣಾಧಿಕಾರಿ ಲಲಿತಾ ಅಮೃತೇಶ್, ಜಾಲ ಹಿರಿಯ ನೋಂದಣಾಧಿಕಾರಿ ರಾಮಪ್ರಸಾದ್ ಹಾಗೂ ದಾಸನಪುರ ಹಿರಿಯ ನೋಂದಣಾಧಿಕಾರಿ ಮಧುಕುಮಾರ್ ಅಮಾನತಾದವರು.

ನೊಂದಣಿ ಮುದ್ರಾಂಕ‌ ಇಲಾಖೆಯ ಐಜಿಆರ್‌ಕೆಪಿ ಮೋಹನ್‌ರಾಜ್, ಈ ಮೂವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ಮಾಡಿದ್ದಾರೆ. ಅಲ್ಲದೇ ಇವರು ಐಜಿಆರ್ ಕಛೇರಿಗೆ ನಿತ್ಯ ಬಂದು ರಿಪೋರ್ಟ್ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಸಬ್ ರಿಜಿಸ್ಟ್ರಾರ್ ‌ಗಳು, ಕಂಪ್ಯೂಟರ್ ಫಾರಂ 9 ಮತ್ತು 11ಬಿಯನ್ನು ಪಡೆದು ರಿಜಿಸ್ಟರ್ ಮಾಡಿದ್ದಾರೆ. ಅಲ್ಲದೇ ಕಾವೇರಿ ಇ ಸ್ವತ್ತು ಪಡೆಯದೇ ಕೆಲ ಆಸ್ತಿಗಳ ರಿಜಿಸ್ಟರ್ ಮಾಡಿದ ಆರೋಪ ಇವರ ಮೇಲಿದೆ. 24 ಏಪ್ರಿಲ್ 2020 ರಿಂದ 18 ಮೇ 2020 ರ ವೇಳೆ ನಡೆದ ನೋಂದಣಿಯಲ್ಲಿ ಈ ಕೃತ್ಯ ನಡೆದಿದೆ.

ಕೆಲವೊಂದು ಆಸ್ತಿಗಳಿಗೆ ಇ-ಖಾತೆ ಇಲ್ಲದಂತೆ ಆಸ್ತಿ ನೋಂದಣಿ ಮಾಡಿದ್ದಾರೆ. ಇದಕ್ಕಾಗಿ ಅವರು ಹಣ ಪಡೆದು ಭ್ರಷ್ಟಾಚಾರ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಕೆಲವೊಂದೆಡೆ ಕಾವೇರಿ ತಂತ್ರಜ್ಞಾನದಲ್ಲಿ ಸುಳ್ಳು ಮಾಹಿತಿ ಎಂಟ್ರಿ ಮಾಡಿದ್ದಾರೆ. ಕೆಲವೊಂದು ಆಸ್ತಿಗಳಲ್ಲಿ ಗ್ರಾಮೀಣ ಪ್ರದೇಶದ ಆಸ್ತಿಗಳಿಗೆ ಬಿಬಿಎಂಪಿ ಲಿಮಿಟ್ , ಅಂದ್ರೆ ಆ ಆಸ್ತಿಯ ಮೌಲ್ಯ ಹೆಚ್ಚು ಮಾಡಲು ಸುಳ್ಳು ಎಂಟ್ರಿ ನೀಡಲಾಗಿದೆ. ಜಾಗದ ಮಾಲೀಕರಿಗೆ ಮುಂದೆ ಮಾರಾಟ ಮಾಡಲು ಹೆಚ್ಚು ಲಾಭ ತರುವ ಉದ್ದೇಶದಿಂದ ನಗರ ವ್ಯಾಪ್ತಿಯ ಆಸ್ತಿ ಎಂದು ತೋರಿಸಿ ಅದಕ್ಕೆ ಅವರಿಂದ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ವಿಚಾರ ಜಿಲ್ಲಾ ನೋಂದಣಾಧಿಕಾರಿಗಳು ತನಿಖೆ ಮಾಡಿದಾಗ ಬಯಲಾಗಿದೆ.

ಜಿಲ್ಲಾ ನೋಂದಣಾಧಿಕಾರಿಗಳು ನೀಡಿರುವ ವರದಿ ಆಧಾರದಲ್ಲಿ ಸಬ್ ರಿಜಿಸ್ಟ್ರಾರ್ ‌ಗಳನ್ನು ಅಮಾನತು ಮಾಡಲಾಗಿದೆ. ಆರೋಪ ಹೊತ್ತ ಅಧಿಕಾರಿಗಳು‌ ಲಕ್ಷಾಂತರ ರೂಪಾಯಿ ಹಣ ಪಡೆದಿರುವ ಅನುಮಾನ ವ್ಯಕ್ತವಾಗಿದ್ದು ಪ್ರಕರಣವನ್ನು ಎಸಿಬಿಗೆ ನೀಡುವಂತೆ ಸ್ಥಳೀಯ ರೈತ ಮುಖಂಡರು ಒತ್ತಾಯ ಮಾಡಿದ್ದಾರೆ.

Share Post

Leave a Reply

error: Content is protected !!