ಫೋನ್ ಪೇ ಮೂಲಕ ಪತ್ನಿಯ ಹಣ ಕದ್ದವ ಬೆಂಕಿ ಹಚ್ಚಿಕೊಂಡು ಬಾವಿಗೆ ಹಾರಿದ!

ಬಾಗೇಪಲ್ಲಿ: ಪತ್ನಿಯ ಖಾತೆಯಲ್ಲಿದ್ದ ಮೂರೂವರೆ ಲಕ್ಷ ರೂಪಾಯಿಯನ್ನು ಆಕೆಗೆ ತಿಳಿಯದಂತೆ ಫೋನ್​ ಪೇ ಮೂಲಕ ಗಂಡನೇ ಲಪಟಾಯಿಸಿದ್ದಾನೆ. ಈ ವಂಚನೆ ಬಯಲಿಗೆ ಬರುತ್ತಿದ್ದಂತೆ ಹೆಂಡತಿ ತವರುಮನೆ ಸೇರಿದ್ದು, ಜಿಗುಪ್ಸೆಗೊಂಡ ಆತ ಬೆಂಕಿ ಹಚ್ಚಿಕೊಂಡು ಪಾಳುಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ!

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮದ ನಿವಾಸಿ ಪ್ರಕಾಶ್​(30) ಮೃತ. ಈತನ ಪತ್ನಿ ಆಂಧ್ರದ ಧರ್ಮಾವರಂ ಮೂಲದವರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪ್ರಕಾಶ್​ ಮದ್ಯವ್ಯಸನಿಯಾಗಿದ್ದ. ಹಾಗಾಗಿ ಮಗಳ ಸಂಸಾರಕ್ಕೆಂದು ಆಕೆಯ ತಂದೆ ಹಣ ಸಹಾಯ ಮಾಡುತ್ತಿದ್ದರು. ಕಳೆದ ವರ್ಷ ಮಗಳ ಹೆಸರಿನಲ್ಲಿರುವ ಬ್ಯಾಂಕ್​ ಖಾತೆ 3.5 ಲಕ್ಷ ರೂ. ಜಮೆ ಮಾಡಿದ್ದರು. ಈ ವಿಚಾರ ತಿಳಿದ ಪ್ರಕಾಶ್​ ಪತ್ನಿ ಖಾತೆಯಿಂದ ಫೋನ್​ ಪೇ ಮೂಲಕ ಒಂದು ವರ್ಷದಿಂದ ಬೇರೆ ಬೇರೆ ಬ್ಯಾಂಕ್​ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು ಝೀರೋ ಬ್ಯಾಲೆನ್ಸ್​ಗೆ ತಂದಿದ್ದ. ಆ ಹಣವನ್ನೆಲ್ಲ ಖರ್ಚು ಮಾಡಿಕೊಂಡು ಏನೂ ಗೊತ್ತಿಲ್ಲದಂತೆ ಇದ್ದ.

ಈ ನಡುವೆ ಐದು ತಿಂಗಳ ಹಿಂದಷ್ಟೇ ಪ್ರಕಾಶ್​ ಮನೆಗೆ ಬಂದ ಮಾವ ಮಗಳ ಬಳಿ ಹತ್ತು ಸಾವಿರ ರೂ. ಬೇಕಿದೆ ಎಂದಿದ್ದಾರೆ. ತಂದೆಗೆ ಹಣ ಕೊಡಲೆಂದು ಮಗಳು ಬ್ಯಾಂಕ್​ಗೆ ಹೋದಾಗ ಖಾತೆಯಲ್ಲಿ ಹಣ ಇಲ್ಲವೆಂದು ಗೊತ್ತಾಗಿದೆ. ಎಲ್ಲ ವಹಿವಾಟು ಫೋನ್​ ಪೇ ಮೂಲಕವೇ ನಡೆದಿದೆ ಎಂದು ಬ್ಯಾಂಕ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮನೆಗೆ ಬಂದು ಈ ವಿಚಾರವಾಗಿ ಗಂಡನ ಜತೆ ಜಗಳವಾಡಿದ ಆಕೆ, ತಂದೆ ಜತೆ ತವರು ಮನೆಗೆ ಹೋಗಿದ್ದಳು.

ಇದರಿಂದ ಜಿಗುಪ್ಸೆಗೊಂಡ ಪ್ರಕಾಶ್​ ಮೂರ್ನಾಲ್ಕು ದಿನದ ಹಿಂದೆ ಗ್ರಾಮ ಹೊರವಲಯದಲ್ಲಿ ಬೆಂಕಿ ಹಚ್ಚಿಕೊಂಡು ಅಲ್ಲೇ ಇದ್ದ ನೀರಿಲ್ಲದ ಬಾವಿಗೆ ಹಾರಿದ್ದಾನೆ. ಬಾವಿಯಲ್ಲಿ ಮಂಗಳವಾರ ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹವನ್ನು ಗುರುತಿಸಿದ ಸ್ಥಳೀಯರು ಗೂಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post

Leave a Reply

error: Content is protected !!