ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಭಾರತಕ್ಕೂ ವಕ್ಕರಿಸಿದ್ದು, ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ 50 ದಿನಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಗೊಳಿಸಿದೆ. ಒಟ್ಟು ನಾಲ್ಕು ಹಂತದಲ್ಲಿ ಈ ಲಾಕ್ ಡೌನ್ ಜಾರಿಗೊಳಿಸಿದ್ದು, ಈಗ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ.
ಮೊದಲ ಎರಡು ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಬಿಗಿ ನಿಲುವು ಅನುಸರಿಸಿದ್ದ ಸರ್ಕಾರ, ಬಳಿಕದ ಲಾಕ್ ಡೌನ್ ಜಾರಿ ವೇಳೆ ಬಹಳಷ್ಟು ಸಡಿಲಿಕೆ ಮಾಡಿದೆ. ಆರ್ಥಿಕ ಚಟುವಟಿಕೆಗಳು ಆರಂಭವಾಗಲಿ ಎಂಬ ಕಾರಣಕ್ಕೆ ಈ ಸಡಿಲಿಕೆಗಳನ್ನು ಮಾಡಲಾಗಿದ್ದು, ನಾಲ್ಕನೇ ಹಂತದ ಲಾಕ್ ಡೌನ್ ಮೇ 31 ಕ್ಕೆ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮೇ 31 ರ ಬಳಿಕ ಲಾಕ್ಡೌನ್ ಮುಂದುವರಿಯಲಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ.
ಆದರೆ ಮೇ 31ರ ಬಳಿಕ ಕೇಂದ್ರ ಸರ್ಕಾರ ಲಾಕ್ ಡೌನ್ ಮುಂದುವರೆಸುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗಿದೆ. ಈಗಾಗಲೇ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಲಾಕ್ ಡೌನ್ ಮುಂದುವರಿಕೆ ಮಾಡಿದರೆ ಮತ್ತಷ್ಟು ಸಮಸ್ಯೆಯಾಗಬಹುದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಹೀಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಕೆಲವೊಂದು ಕಠಿಣ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಕೊರೊನಾ ಸೋಂಕು ವ್ಯಾಪಿಸದಂತೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.