ಏಮ್ಸ್ ಆಸ್ಪತ್ರೆಯ ಆಶ್ರಯ ಕೇಂದ್ರದಲ್ಲಿ 21 ಮಂದಿಗೆ ಕೊರೊನಾ ಸೋಂಕು ಪತ್ತೆ

ದೆಹಲಿ, ಮೇ 23: ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿರುವ ಹೊರರೋಗಿಗಳ ಆಶ್ರಯ ಕೇಂದ್ರದಲ್ಲಿ 21 ಜನರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಖಚಿತಪಡಿಸಿದೆ.

ಈ 21 ಜನರ ಪೈಕಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಏಳು ವರ್ಷದ ಮಗು ಸಹ ಸೇರಿದೆ. ಇದರಲ್ಲಿ ಹಲವರು ಗಂಭೀರ ರೋಗಗಳಿಗೆ ತುತ್ತಾಗಿದ್ದು, ದೀರ್ಘ ಸಮಯದಿಂದ ಚಿಕಿತ್ಸೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬರುವ ಹೊರರೋಗಿಗಳಿಗೆ ಹಾಗೂ ಅವರ ಕುಟುಂಬದವರು ಉಳಿದುಕೊಳ್ಳಲು ಆಶ್ರಯ ಮನೆಗಳಿದ್ದು, ಒಂದೇ ಮನೆಯಲ್ಲಿ 21 ಜನರಿಗೆ ಸೋಂಕು ಅಂಟಿಕೊಂಡಿದೆ.

ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಇಬ್ಬರು ರೋಗಿಗಳಿಗೆ ಕೊರೊನಾ ಪಾಸಿಟಿವ್ ಆಗಿರುವುದು ಸೋಮವಾರ ಬಹಿರಂಗವಾಗಿತ್ತು. ಈ ಇಬ್ಬರು ಆಸ್ಪತ್ರೆಯ ಇದೇ ಆಶ್ರಯ ಕೇಂದ್ರದಲ್ಲಿ ತಂಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಹೊಸದಾಗಿ ಸೋಂಕು ದೃಢಪಟ್ಟಿರುವ ಎಲ್ಲ 21 ರೋಗಿಗಳನ್ನು ಲೋಕ ನಾಯಕ್ ಆಸ್ಪತ್ರೆ, ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಏಮ್ಸ್ ಜಜ್ಜರ್ನಲ್ಲಿರುವ ಕ್ವಾರಂಟೈನ್ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ಆಶ್ರಯ ಕೇಂದ್ರದಲ್ಲಿದ್ದ ಇನ್ನೂ ಏಳು ಜನರಿಗೆ ರೋಗದ ಲಕ್ಷಣ ಕಂಡು ಬಂದಿದೆ. ಆದರೆ ಅವರ ವರದಿ ಬಂದಿಲ್ಲ. ಉಳಿದ 50 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಒಟ್ಟು ಈ ಕೇಂದ್ರದಲ್ಲಿ ಸುಮಾರು 80 ಜನರು ವಾಸವಾಗಿದ್ದರು ಎನ್ನಲಾಗಿದೆ.

 

Share Post

Leave a Reply

Your email address will not be published. Required fields are marked *

error: Content is protected !!