ಕರೊನಾ ವಿರುದ್ಧ ದನಿಗೂಡಿಸಿದ ನಮ್ಮೂರಿನ ತಾರೆಯರು .

ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಹಲವು ಪ್ರಯತ್ನಗಳು, ಕಳೆದ ಎರಡು ತಿಂಗಳುಗಳಿಂದ ಆಗುತ್ತಲೇ ಇದೆ. ಈಗ ಪವನ್ ಒಡೆಯರ್ ಸಹ ‘ಬದಲಾಗು ನೀನು … ಬದಲಾಯಿಸು ನೀನು …’ ಎಂಬ ಎಂಟು ನಿಮಿಷಗಳ ಹಾಡನ್ನು ಮಾಡಿದ್ದಾರೆ. ವಿಶೇಷವೆಂದರೆ, ಸ್ಯಾಂಡಲ್‌ವುಡ್‌ನ ಹಲವು ಜನಪ್ರಿಯ ಸ್ಟಾರ್‌ಗಳು ಈ ಹಾಡಿನ ಭಾಗವಾಗಿದ್ದಾರೆ. ಕರೊನಾ ಜತೆಗೆ ಬದುಕುವುದು ಮುಂದಿನ ದಿನಗಳಲ್ಲಿ ಅನಿವಾರ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಇತ್ತೀಚೆಗೆ ಹೇಳಿದೆ. ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯು ಒಂದು ವೀಡಿಯೋ ನಿರ್ಮಿಸಿದೆ. ಈ ಹಾಡಿನಲ್ಲಿ ಚಂದನವನದ ಜನಪ್ರಿಯ ತಾರೆಯರು ಕಾಣಿಸಿಕೊಂಡಿದ್ದು, ಪವನ್ ಒಡೆಯರ್ ಇದನ್ನು ನಿರ್ದೇಶಿಸಿದ್ದಾರೆ.

ಈ ಹಾಡಿನ ಕಾನ್ಸೆಪ್ಟ್ ಮತ್ತು ನಿರ್ದೇಶನ ಪವನ್ ಒಡೆಯರ್ ಅವರದ್ದಾಗಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಪ್ರದ್ಯುಮ್ನ ನರಹಳ್ಳಿ ಸಾಹಿತ್ಯ ಬರೆದರೆ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಪವನ್ ಮತ್ತು ಇಮ್ರಾನ್, ಹಲವು ಕಲಾವಿದರನ್ನು ಭೇಟಿ ಮಾಡಿ, ಚಿತ್ರೀಕರಣ ಮಾಡಿಕೊಂಡು ಬಂದಿದ್ದಾರೆ. ಇನ್ನೂ ಕೆಲವರು ಮನೆಯಲ್ಲೇ ಅಗತ್ಯವಿರುವ ದೃಶ್ಯಗಳನ್ನು ಶೂಟ್ ಮಾಡಿ ಕಳುಹಿಸಿದ್ದಾರೆ. ಮಹೇಶ್ ರೆಡ್ಡಿ ಈ ಹಾಡಿನ ಎಡಿಟಿಂಗ್ ಮಾಡುತ್ತಿದ್ದು, ಮೇ 25ರಂದು ಸಂಜೆ 5ಕ್ಕೆ ಈ ಹಾಡು, ಯೂಟ್ಯೂಬ್‌ನ ಡಿಬೀಟ್ಸ್ ಚಾನಲ್‌ನಲ್ಲಿ ಬಿಡುಗಡೆಯಾಗಲಿದೆ.

ಅಂದಹಾಗೆ, ಎಂಟು ನಿಮಿಷಗಳ ಈ ಹಾಡಿನಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದರೆಲ್ಲಾ ಕಾಣಿಸಿಕೊಂಡಿದ್ದಾರೆ. ಶಿವರಾಜಕುಮಾರ್, ಉಪೇಂದ್ರ, ದರ್ಶನ್, ರವಿಚಂದ್ರನ್, ಗಣೇಶ್, ಸುಮಲತಾ ಅಂಬರೀಶ್, ರಕ್ಷಿತ್ ಶೆಟ್ಟಿ, ರವಿಶಂಕರ್, ರಮೇಶ್ ಅರವಿಂದ್, ವಿಜಯ್ ಪ್ರಕಾಶ್, ಶಾನ್ವಿ ಶ್ರೀವಾತ್ಸವ್, ಹರ್ಷಿಕಾ ಪೂಣಾಚ್ಛ, ಆಸಿಕಾ ರಂಗನಾಥ್, ರಾಕ್‌ಲೈನ್ ವೆಂಕಟೇಶ್, ಕ್ರಿಕೆಟಿಗ ಅನಿಲ್ ಕುಂಬ್ಳೆ ಮುಂತಾದವರು ಕಾಣಿಸಿಕೊಂಡಿದ್ದಾರೆ.

 

Share Post

Leave a Reply

Your email address will not be published. Required fields are marked *

error: Content is protected !!