Monday, January 25, 2021
Home ದೇಶ ಕೊರೊನಾ ರಣಕೇಕೆ : ದೇಶದಲ್ಲಿ ಒಂದೇ ದಿನ 140 ಮಂದಿ ಬಲಿ

ಇದೀಗ ಬಂದ ಸುದ್ದಿ

ಕೊರೊನಾ ರಣಕೇಕೆ : ದೇಶದಲ್ಲಿ ಒಂದೇ ದಿನ 140 ಮಂದಿ ಬಲಿ

ಹೊಸದಿಲ್ಲಿ, ಮೇ 23: ದೇಶದಲ್ಲಿ ಶುಕ್ರವಾರ ಒಂದೇ ದಿನ 6,339 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, 140 ಮಂದಿ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರವೊಂದರಲ್ಲೇ 2,940 ಮಂದಿಗೆ ಸೋಂಕು ತಗುಲಿದೆ. ಕೊರೋನ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಸತತ ನಾಲ್ಕನೇ ದಿನವೂ ಹೊಸ ದಾಖಲೆ ಸೃಷ್ಟಿಯಾಗಿದೆ.

ದೇಶದಲ್ಲಿ ಒಟ್ಟು 1,23,081 ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಪೈಕಿ ಮೂರನೇ ಒಂದು ಪಾಲು ಪ್ರಕರಣಗಳು (22,794) ಕಳೆದ ನಾಲ್ಕು ದಿನಗಳಲ್ಲಿ ದಾಖಲಾಗಿವೆ. ಶುಕ್ರವಾರ 140 ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದು, ಮಹಾರಾಷ್ಟ್ರದಲ್ಲಿ 63, ಗುಜರಾತ್ನಲ್ಲಿ 29 ಹಾಗೂ ದಿಲ್ಲಿಯಲ್ಲಿ 14 ಸಾವು ಸಂಭವಿಸಿದೆ. ಸತತ ಆರನೇ ದಿನದಿಂದ ದೇಶದಲ್ಲಿ 130ಕ್ಕಿಂತ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಮಧ್ಯೆ ದೇಶದಲ್ಲಿ 51,538 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಶುಕ್ರವಾರ ಗರಿಷ್ಠ ಪ್ರಕರಣಗಳು ವರದಿಯಾಗುವ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 44,582ಕ್ಕೇರಿದೆ. ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,753.

ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಒಪ್ಪಿಕೊಂಡಿರುವ ಆರೋಗ್ಯ ಸಚಿವ ರಾಜೇಶ್ ಟೋಪೆ, ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳ ಶೇಕಡ 80ರಷ್ಟು ಹಾಸಿಗೆಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಜನಸಾಂಧ್ರತೆ ಅಧಿಕ ಇರುವ ಪ್ರದೇಶಗಳಿಂದಲೇ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದಲ್ಲಿ ಪ್ರತಿ 10 ಲಕ್ಷ ಮಂದಿಯ ಪೈಕಿ 332 ಮಂದಿಗೆ ಸೋಂಕು ತಗುಲಿದ್ದು, 11 ಮಂದಿ ಸಾಯುತ್ತಿದ್ದಾರೆ.

ದಿಲ್ಲಿಯಲ್ಲೂ ಸೋಂಕಿತರ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, 660 ಪ್ರಕರಣಗಳು ಹೊಸದಾಗಿ ಸೇರಿವೆ. ಉತ್ತರ ಪ್ರದೇಶದಲ್ಲಿ 232 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,763ಕ್ಕೇರಿದೆ. ಬಿಹಾರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,000 ಗಡಿ ದಾಟಿದ್ದು, ಒಡಿಶಾದಲ್ಲಿ 1,189 ಮಂದಿ ಸೋಂಕಿತರು ಇದ್ದಾರೆ.

TRENDING