ಟೊಮಾಟೊ ಬೆಲೆ ಕೆಜಿಗೆ 1 ರೂಪಾಯಿ, ಈರುಳ್ಳಿ ಬೆಲೆ ಕೆಜಿಗೆ 8 ರೂಪಾಯಿ

ದೆಹಲಿ, : ಇಡೀ ದೇಶ ಕೊರೊನಾ ವೈರಸ್, ಅಂಫಾನ್ ಚಂಡಮಾರುತದ ದಾಳಿಗೆ ಸಿಲುಕಿ ಒದ್ದಾಡುತ್ತಿದೆ. ಮತ್ತೊಂದು ಕಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿಯಲ್ಲಿ ಟೊಮಾಟೊ ಹಾಗೂ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದೆ. ಇದು ಸಹಜವಾಗಿ ರೈತರಿಗೆ ಆತಂಕ ತಂದಿದೆ. ದೆಹಲಿಯ ಸಗಟು ಮಾರುಕಟ್ಟೆಯಲ್ಲಿ ಟೊಮಾಟೊ ಬೆಲೆ ಕೆಜಿಗೆ 1-2 ರೂಪಾಯಿ ಆಗಿದೆ. ಈರುಳ್ಳಿ ಬೆಲೆ ಕೆಜಿಗೆ 8 ರೂಪಾಯಿ ಆಗಿದೆ. ಟೊಮಾಟೊ ಹಾಗೂ ಈರುಳ್ಳಿಯ ಸರಬರಾಜು ಹೆಚ್ಚಾಗುತ್ತಿದೆ. ಆದರೆ, ಟೊಮಾಟೊ, ಈರುಳ್ಳಿಯನ್ನು ಕೇಳೋರೇ ಇಲ್ಲ. ಇದು ಮಾರಾಟಗಾರರಿಗೆ ಹಾಗೂ ರೈತರಿಗೆ ದಿಕ್ಕು ತೋಚದಂತೆ ಮಾಡಿದೆ. ಇದರಿಂದ ರೈತರಿಂದ ನೇರ ಖರೀದಿ ಮಾಡುವ ಸಗಟು ವ್ಯಾಪಾರಿಗಳಿಗೆ ಹೊಡೆತ ಬಿದ್ದಿದೆ. ಎರಡು ವಾರಗಳ ಹಿಂದೆ ಟೊಮಾಟೊ 8-10 ರೂಪಾಯಿವರೆಗೂ ವಹಿವಾಟು ನಡೆಸಿದ್ದೆವು ಎಂದು ಆಜಾದ್‌ಪುರ ಮಂಡಿಯ ಟೊಮಾಟೊ ಮತ್ತು ತರಕಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುಭಾ ಚುಗ್ ಹೇಳಿದ್ದಾರೆ.

ಸತತ ಎರಡು ತಿಂಗಳ ಲಾಕ್‌ಡೌನ್‌ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಲಾಕ್‌ಡೌನ್‌ ಕಾರಣದಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಭೆ, ಸಮಾರಂಭಗಳು, ಇನ್ನಿತರ ಕಾರ್ಯಕ್ರಮಗಳು ನಡೆದಿಲ್ಲ. ಹಾಗಾಗಿ, ರೈತರು ಬೆಳೆದ ಟೊಮಾಟೊ ಹಾಗೂ ಈರುಳ್ಳಿ ಕೊಂಡುಕೊಳ್ಳುವವರು ಇರಲಿಲ್ಲ. ದಿನಕ್ಕೆ 50-300 ಕೆಜಿ ಖರೀದಿಸುತ್ತಿದ್ದ ಹೋಟೆಲ್‌ಗಳ ಬೇಡಿಕೆ 50% -60% ರಷ್ಟು ಕುಸಿದಿದೆ. 15-20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮರಳಿ ಮನೆಗೆ ಹೋಗಿದ್ದರಿಂದ ಹಾಸ್ಟೆಲ್‌ಗಳಲ್ಲಿ ಟೊಮಾಟೊ ಮತ್ತು ಈರುಳ್ಳಿ ಸೇವನೆಯೂ ಕುಸಿದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಈಗ ನಿಧಾನವಾಗಿ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗುತ್ತಿದೆ. ಆದರೂ ಈರುಳ್ಳಿ, ಟೊಮಾಟೊ ಬೇಡಿಕೆ ಇಲ್ಲ ಎಂದು ದೆಹಲಿ ಸಗಟು ಮಾರುಕಟ್ಟೆಯ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!