ಸಿಗರೇಟ್ ಲಂಚ: ಸಿಸಿಬಿ ಎಸಿಪಿ, ಇನ್ಸ್ಪೆಕ್ಟರ್ಗಳ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು: ಸಿಗರೇಟ್‌ ವಿತರಕರು ಹಾಗೂ ನಕಲಿ ಮಾಸ್ಕ್‌ ತಯಾರಿಕಾ ಕಂಪನಿಗಳಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ಸಿಸಿಬಿ ಎಸಿಪಿ ಪ್ರಭುಶಂಕರ್‌ ಹಾಗೂ ಇನ್‌ಸ್ಪೆಕ್ಟರ್‌ಗಳಾದ ಅಜಯ್‌ ಹಾಗೂ ನಿರಂಜನ ಕುಮಾರ್‌ ಸೇರಿದಂತೆ ಐವರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶುಕ್ರವಾರ ಬೆಳಗಿನ ಜಾವ ದಾಳಿ ಮಾಡಿದ್ದಾರೆ. ಸಿಗರೇಟ್‌ ಲಂಚ ಪ್ರಕರಣದಲ್ಲಿ ವಿತರಕರು ಹಾಗೂ ಸಿಸಿಬಿ ಅಧಿಕಾರಿಗಳ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡಿರುವ ಭೂಷಣ್‌ ಮತ್ತು ಯಲಹಂಕದ ಬಾಬು ಎಂಬುವರ ಮನೆಗಳ ಮೇಲೂ ದಾಳಿ ಮಾಡಿ, ಶೋಧ ನಡೆಸಲಾಗುತ್ತಿದೆ. ಮೂವರು ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಎಸಿಬಿ ಗುರುವಾರ ಎಫ್‌ಐಆರ್‌ ದಾಖಲಿಸಿ, ಮನೆಗಳನ್ನು ಶೋಧಿಸಲು ವಾರೆಂಟ್‌ ಪಡೆದಿತ್ತು. ಆರೋಪಿ ಅಧಿಕಾರಿಗಳು ಮತ್ತು ಕುಟುಂಬದ ಸದಸ್ಯರು ನಿದ್ದೆಯಿಂದ ಏಳುವ ಮೊದಲೇ ಎಸಿಬಿ ಅಧಿಕಾರಿಗಳ ತಂಡಗಳು ಏಕಕಾಲಕ್ಕೆ ಮನೆಗಳ ಬಾಗಿಲು ತಟ್ಟಿ ಶಾಕ್‌ ಕೊಟ್ಟಿವೆ. ಎಸಿಬಿಯ ಆರು ಡಿಎಸ್‌ಪಿಗಳು, ಆರು ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳು ಮತ್ತಿತರ ಸಿಬ್ಬಂದಿ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಸಿಸಿಬಿ ಆರ್ಥಿಕ ಅಪರಾಧ ತಡೆ ವಿಭಾಗದಲ್ಲಿದ್ದ ಪ್ರಭುಶಂಕರ್‌, ಅಜಯ್‌ ಹಾಗೂ ನಿರಂಜನ ಕುಮಾರ್, ಲಾಕ್‌ಡೌನ್‌ ಸಮಯದಲ್ಲಿ ವಿವಿಧ ಕಂಪನಿಗಳ ಸಿಗರೇಟ್‌ಗಳನ್ನು ದುಬಾರಿ ಬೆಲೆಗೆ ಮಾರಲು ಅವಕಾಶ ಕೊಡಲು ಲಂಚ ಪಡೆದ ಆರೋಪಕ್ಕೆ ಒಳಗಾಗಿದ್ದಾರೆ. ಲಾಕ್‌ಡೌನ್‌ ವೇಳೆ ತಂಬಾಕು ಉತ್ಪನ್ನಗಳು ಮತ್ತು ಮದ್ಯ ಮಾರಾಟ ನಿಷೇಧಿಸಲಾಗಿತ್ತು.

ಸಿಸಿಬಿ‌ ಅಧಿಕಾರಿಗಳು ಲಂಚ ಪಡೆದ ಮೂರು ಪ್ರಕರಣಗಳನ್ನು ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆ (ಪಿ.ಸಿ. ಆಯಕ್ಟ್‌) ಅಡಿ ತನಿಖೆ ನಡೆಸುವಂತೆ ಡಿಜಿ ಮತ್ತು ಐಜಿ ಪ್ರವೀಣ್‌ ಸೂದ್‌ ಈಚೆಗೆ ಎಸಿಬಿಗೆ ಆದೇಶಿಸಿದ್ದರು. ಈ ಕಾಯ್ದೆಯ ಸೆಕ್ಷನ್‌ 17(ಎ) ಅನ್ವಯ ಸಕ್ಷಮ ಪ್ರಾಧಿಕಾರದ ಒಪ್ಪಿಗೆ ಪಡೆದು ಎಫ್‌ಐಆರ್‌ ದಾಖಲಿಸಲಾಗಿದೆ. ಯಾವುದೇ ಸರ್ಕಾರಿ ಅಧಿಕಾರಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಕಡ್ಡಾಯ. ಆರೋಪ ಸಾಬೀತಾದರೆ ಕನಿಷ್ಠ 3ರಿಂದ 7ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಪ್ರಭುಶಂಕರ್‌ ಮತ್ತವರ ಸಹೋದ್ಯೋಗಿಗಳು ಎಂ.ಡಿ. ಆಯಂಡ್‌ ಸನ್ಸ್‌ ಮತ್ತು ಮಹಾವೀರ್‌ ಟ್ರೇಡರ್ಸ್‌ ಮತ್ತಿತರ ಸಿಗರೇಟ್‌ ವಿತರಕರಿಂದ ₹ 85 ಲಕ್ಷ ಲಂಚ ಪಡೆದ ಆರೋಪಕ್ಕೆ ಓಳಗಾಗಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ಎನ್-‌ 95 ನಕಲಿ ಮಾಸ್ಕ್‌ ತಯಾರಿಸುತ್ತಿದ್ದಾಗ ಸಿಕ್ಕಿಬಿದ್ದ ಆರೋಪಿಗೆ ರಕ್ಷಣೆ ನೀಡಲು ₹ 15 ಲಕ್ಷ ಲಂಚ ಪಡೆದಿದ್ದಾರೆ ಎಂದು ದೂರಲಾಗಿದೆ. ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಸಿಬಿ ಡಿಸಿಪಿ ರವಿಕುಮಾರ್‌ ಆರೋಪಿ ಅಧಿಕಾರಿಗಳ ಬಳಿ ₹ 52 ಲಕ್ಷ ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮೂವರು ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಸುಲಿಗೆ ಪ್ರಕರಣವೂ ದಾಖಲಾಗಿದ್ದು, ಪ್ರಭುಶಂಕರ್‌ ಅವರಿಗೆ ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ. ಸದ್ಯ ಮೂವರೂ ಅಧಿಕಾರಿಗಳು ಸಸ್ಪೆಂಡ್‌ ಆಗಿದ್ದಾರೆ.

 

Share Post

Leave a Reply

Your email address will not be published. Required fields are marked *

error: Content is protected !!